

ಹಗರಿಬೊಮ್ಮನಹಳ್ಳಿ (ಬಳ್ಳಾರಿ): ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆ ವೇಳೆ ಸ್ಥಳೀಯ ಕಾಂಗ್ರೆಸ್ ಶಾಸಕ ಭೀಮಾನಾಯ್ಕ, "ಬಾ ಲೇ.. ಮಗನೆ'' ಎಂದು ಸವಾಲು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚುನಾವಣೆಯಲ್ಲಿ ಕಾಂಗ್ರೆಸ್-ಬಿಜೆಪಿ ನಡುವೆ ಜಿದ್ದಾಜಿದ್ದಿ ಹೋರಾಟ, ಕಾರ್ಯಕರ್ತರ ಮಧ್ಯೆ ಜಟಾಪಟಿ ಏರ್ಪಟಿತ್ತು. ಮತದಾನ ಸಂದರ್ಭ ಎರಡೂ ಪಕ್ಷಗಳ ಕಾರ್ಯಕರ್ತರ ನಡುವೆ ಘರ್ಷಣೆಯೂ ನಡೆದಿತ್ತು. ಈ ವೇಳೆ ಶಾಸಕ ಭೀಮಾನಾಯ್ಕ ತೋಳುತಟ್ಟಿಕೊಳ್ಳುತ್ತ "ಬಾ ಲೇ.. ಮಗನೇ'' ಎಂದು ಅಬ್ಬರಿಸಿರುವ ವಿಡಿಯೋ ವೈರಲ್ ಆಗಿದ್ದು, ಭಾರೀ ಸಂಚಲನ ಮೂಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು, ಹಗರಿಬೊಮ್ಮನಹಳ್ಳಿ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ವೇಳೆ ಶಾಸಕ ಭೀಮಾನಾಯ್ಕ ಕಾಂಗ್ರೆಸ್ ಸದಸ್ಯರನ್ನು ಕಾರಲ್ಲಿ ಕೂರಿಸಿಕೊಂಡು ಪುರಸಭೆ ಆವರಣ ಪ್ರವೇಶ ಮಾಡಿದ್ದಾರೆ. ಶಾಸಕರ ನಡೆಯನ್ನು ಬಿಜೆಪಿ ಸದಸ್ಯರು ಪ್ರಶ್ನಿಸಿದ ಬಳಿಕ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭ ಭೀಮಾನಾಯ್ಕ ಸವಾಲು ಹಾಕಿದ್ದಾರೆ. ದರ್ಪ ತೋರಿಸಿರುವ ಶಾಸಕರ ಘನತೆ ಏನೆಂಬುದು ಗೊತ್ತಾಗಿದೆ ಎಂದು ಕಿಡಿಕಾರಿದ್ದಾರೆ.