

ಸಕಲೇಶಪುರ: ಹಾಸನ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಕಾಂಗ್ರೆಸ್ ಕಾರ್ಯಕರ್ತರು ಹಳೆ ಬಸ್ ನಿಲ್ದಾಣದ ಮುಂಭಾಗ ಪಟಾಕಿ ಸಿಡಿಸಿ ಸಂಭ್ರಮಾಚರಿಸಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿ ಸಿಹಿ ಹಂಚಿದರು.
ಕಾಂಗ್ರೆಸ್ ಮುಖಂಡ ಮುರಳಿಮೋಹನ್ ಮಾತನಾಡಿ, 2 ದಶಕಗಳ ನಂತರ ಹಾಸನ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್ ವಶಪಡಿಸಿಕೊಂಡಿದೆ. ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತರೂ ಕ್ಷೇತ್ರವನ್ನು ಬಿಟ್ಟು ಹೋಗದೆ ಕ್ಷೇತ್ರದಲ್ಲಿ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬೈರಮುಡಿ ಚಂದ್ರು ಮಾತನಾಡಿ, ಕಾಂಗ್ರೆಸ್ ಕ್ಷೇತ್ರವನ್ನು ಮರಳಿ ಪಡೆಯಲು ಎರಡು ದಶಕಗಳೇ ಕಳೆದಿವೆ. ಇದು ಸಂಭ್ರಮದ ಅಲೆ ಮೂಡಿಸಿದೆ ಎಂದರು.
ಕೆಪಿಸಿಸಿ ಸದಸ್ಯರಾದ ಕೊಲ್ಲಹಳ್ಳಿ ಸಲೀಂ, ಯಡೆಹಳ್ಳಿ ಮಂಜುನಾಥ್, ಪುರಸಭೆ ಮಾಜಿ ಅಧ್ಯಕ್ಷ ಸಯ್ಯದ್ ಮುಫೀಜ್, ಪುರಸಭಾ ಸದಸ್ಯೆ ಅನ್ನಪೂರ್ಣ, ಮುಖಂಡರಾದ ಬ್ಯಾಕರವಳ್ಳಿ ವಿಜಯ್‌ಕುಮಾರ್, ಪರ್ವತಯ್ಯ, ಕಿರಣ್ ಬಿಳುತಾಳ್ ಇತರರಿದ್ದರು.