

ಬೆಂಗಳೂರು: ಬಿಜೆಪಿ ನಾಯಕ, ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರದ ಮಾಜಿ ಸಚಿವ ಎಸ್.ಎಂ. ಕೃಷ್ಣ ಅವರು ಇಂದು ರಾಜಕೀಯ ಕ್ಷೇತ್ರದಿಂದ ನಿವೃತ್ತರಾಗುವ ಕುರಿತು ಆಡಿದ ಮಾತುಗಳನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್, ‘‘ನಮ್ಮ ಪಕ್ಷದಲ್ಲಿ ಅಗ್ರಗಣ್ಯ ನಾಯಕರಾಗಿದ್ದ ಕೃಷ್ಣರನ್ನು ಬೀದಿಗೆ ತಂದು ಅವಮಾನಿಸಿದ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ’’ ಎಂದು ಟೀಕಿಸಿದೆ.
‘‘ಹಿರಿಯ ನಾಯಕರಾಗಿರುವ ಕೃಷ್ಣ ಅವರಿಗೆ ಅಪಾರವಾದ ರಾಜಕೀಯ ಮತ್ತು ಆಡಳಿತಾತ್ಮಕ ಅನುಭವ ಇದೆ. ಅವರ ಬಳಿ ಹೋಗಿ ಸಲಹೆ ಕೇಳುವ ಮನಸ್ಸು ಬಿಜೆಪಿ ನಾಯಕರಿಗೆ ಇಲ್ಲ. ಅವರ ಸಲಹೆ ಬಿಜೆಪಿಗೆ ಬೇಕಾಗಿಯೂ ಇಲ್ಲ, ಬಿಜೆಪಿಯ ಸಿದ್ಧಾಂತಗಳು ಕೃಷ್ಣ ಅವರಿಗೆ ಅಪಥ್ಯವಾಗಿವೆ ಅಥವಾ ಕೃಷ್ಣ ಅವರೇ ಬಿಜೆಪಿಗೆ ಅಪಥ್ಯವಾಗಿರಬಹುದು’’ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.