

ವಿಜಯವಾಣಿ ಸುದ್ದಿಜಾಲ ಕಾರವಾರ
ಮುಂಬರುವ ವಿಧಾನಸಭಾ ಚುನಾವಣೆಗೆ ರಾಜ್ಯದ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಐಸಿಸಿ ಕೇಂದ್ರ ಚುನಾವಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಶನಿವಾರ ಬಿಡುಗಡೆ ಮಾಡಿದ್ದು, ನಿರೀಕ್ಷೆಯಂತೆ ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಹೆಸರು ಅದರಲ್ಲಿದೆ. ಗೋಜಲಾಗಿರುವ ಇನ್ನು ಮೂರು ಕ್ಷೇತ್ರಗಳಿಗೆ ಕೈ ಸ್ಪರ್ಧಿಗಳ್ಯಾರು ಎಂಬ ಕುತೂಹಲ ಉಳಿದುಕೊಂಡಿದೆ.
ಹಳಿಯಾಳ-ಜೊಯಿಡಾ-ದಾಂಡೇಲಿ ಕ್ಷೇತ್ರಕ್ಕೆ ಆರ್.ವಿ.ದೇಶಪಾಂಡೆ, ಕಾರವಾರ-ಅಂಕೋಲಾ ಕ್ಷೇತ್ರಕ್ಕೆ ಸತೀಶ ಸೈಲ್ ಹಾಗೂ ಭಟ್ಕಳ-ಹೊನ್ನಾವರ ಕ್ಷೇತ್ರಕ್ಕೆ ಮಂಕಾಳ ಎಸ್.ವೈದ್ಯ ಹೆಸರುನ್ನು ಬಿಡುಗಡೆ ಮಾಡಲಾಗಿದೆ. ಈ ಮೂರು ಕ್ಷೇತ್ರದಲ್ಲಿ ಟಿಕೆಟ್‌ಗಾಗಿ ಹೆಚ್ಚಿನ ಪೈಪೋಟಿ ಇರಲಿಲ್ಲ.
10 ನೇ ಬಾರಿಗೆ ದೇಶಪಾಂಡೆ:
ಹಳಿಯಾಳ ಕ್ಷೇತ್ರದಿಂದ 1983 ರಿಂದ ಎಲ್ಲ ವಿಧಾನಸಭೆ ಚುನಾವಣೆಗಳಲ್ಲಿ ಸತತವಾಗಿ ಸ್ಪರ್ಧಿಸುತ್ತಿರುವ 76 ವರ್ಷದ ಆರ್.ವಿ.ದೇಶಪಾಂಡೆ ಈ ವರ್ಷ 10 ನೇ ಬಾರಿಗೆ ಸ್ಪರ್ಧೆಗಿಳಿಯುವ ಮೂಲಕ ದಾಖಲೆ ಬರೆಯಲಿದ್ದಾರೆ. ಮೊದಲ ನಾಲ್ಕು ಬಾರಿ ಅವರು ಜನತಾ ಪರಿವಾರದಿಂದ ಸ್ಪರ್ಧಿಸಿ ಗೆಲುವು ಕಂಡಿದ್ದರು. 1999 ರಿಂದ ಅವರು ನಿರಂತರವಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. . ಈ ವಷ ಅವರಿಗೆ ಕಾಂಗ್ರೆಸ್‌ನಿಂದ ಸತತ 6 ನೇ ಬಾರಿಗೆ ಟಿಕೆಟ್ ಸಿಕ್ಕಿದೆ. ಇದುವರೆಗೆ ಅವರು 8 ಬಾರಿ ಗೆಲುವು ಸಾಧಿಸಿದ್ದು, 2008 ರಲ್ಲಿ ಒಮ್ಮೆ ಸೋಲು ಕಂಡಿದ್ದರು. ಈ ಮೊದಲು ಮಾಜಿ ಎಂಎಲ್‌ಸಿ ಶ್ರೀಕಾಂತ ಘೋಟ್ನೇಕರ್ ಅವರು ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಅವರು ಜೆಡಿಎಸ್ ಸೇರುವ ಮೂಲಕ ದೇಶಪಾಂಡೆ ಹಾದಿ ಸುಗಮವಾಗಿಸಿದ್ದಾರೆ.
ಭಟ್ಕಳದಿಂದ ಮಂಕಾಳ:
ಮಂಕಾಳ ಸುಬ್ಬ ವೈದ್ಯ ಜಿಪಂ ಸದಸ್ಯರಾಗಿದ್ದವರು. 2013 ರ ಚುನಾವಣೆಯಲ್ಲಿ ಭಟ್ಕಳ-ಹೊನ್ನಾವರ ಕ್ಷೇತ್ರದಿಂದ ಪಕ್ಷೇತರವಾಗಿ ಸ್ಪರ್ಧಿಸಿ ಗೆಲುವು ಕಂಡರು. ಆಗಿನ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ಸೂಚಿಸಿದರು. 2018 ರಲ್ಲಿ ಅವರು ನೇರವಾಗಿ ಕಾಂಗ್ರೆಸ್‌ನಿಂದಲೇ ಸ್ಪರ್ಧೆ ಮಾಡಿದ್ದರು. ಆದರೆ, ಸೋಲು ಕಂಡರು. ಈಗ ಎರಡನೇ ಬಾರಿ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿದೆ. ಭಟ್ಕಳದಲ್ಲಿ ಮಾಜಿ ಶಾಸಕ ಜೆ.ಡಿ.ನಾಯ್ಕ, ದೀಪಕ್ ನಾಯ್ಕ ಸೇರಿ ಒಟ್ಟು ಐವರು ಟಿಕೆಟ್‌ಗಾಗಿ ಕೆಪಿಸಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ಹಾಲಿ ಬಿಜೆಪಿ ಶಾಸಕರಿಗೆ ಪ್ರಬಲ ಪೈಪೋಟಿ ನೀಡುವ ಸಾಮರ್ಥ್ಯ ಹೊಂದಿರುವ ಕಾರಣಕ್ಕೆ ವೈದ್ಯ ಅವರಿಗೆ ಟಿಕೆಟ್ ನೀಡಲಾಗಿದೆ.
ಮೂರನೇ ಬಾರಿಗೆ ಸೈಲ್‌ಗೆ ಟಿಕೆಟ್:
2008 ರಲ್ಲಿ ಕಾರವಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ ಅಸ್ನೋಟಿಕರ್ ಆಪರೇಶನ್ ಕಮಲಕ್ಕೆ ಒಳಗಾಗಿ ಉಪ ಚುನಾವಣೆ ಎದುರಾದಾಗ ಕಾಂಗ್ರೆಸ್ ಸೃಷ್ಟಿಸಿದ ನಾಯಕ ಸತೀಶ ಸೈಲ್. 2009 ರ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ದಿಸಿದ ಉದ್ಯಮಿ ಸೈಲ್ ಆಗಿನ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಆನಂದ ಅಸ್ನೋಟಿಕರ್ ಅವರಿಗೆ ತೀವ್ರ ಪೈಪೋಟಿ ನೀಡಿದ್ದರು. ಆದರೆ, 2013 ರಲ್ಲಿ ಅಕ್ರಮ ಅದಿರು ಸಾಗಣೆ ಆರೋಪ ಹೊತ್ತ ಕಾರಣ ಕಾಂಗ್ರೆಸ್ ಅವರಿಗೆ ಟಿಕೆಟ್ ನಿರಾಕರಿಸಿತ್ತು. ಸೈಲ್ ಪಕ್ಷೇತರವಾಗಿ ಕಣಕ್ಕಿಳಿದು ಗೆದ್ದರು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಬೆಂಬಲ ನೀಡಿದರು. 2018 ರಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ ಪಡೆದು ಸೋಲು ಕಂಡಿದ್ದರು. ಈಗ ಮೂರನೇ ಬಾರಿಗೆ ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿದೆ. ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷೆ ಚೈತ್ರಾ ಕೊಠಾರಕರ್, ರಾಜ್ಯ ಯುವ ಕಾಂಗ್ರೆಸ್‌ನ ಮಾಜಿ ಪ್ರಧಾನ ಕಾರ್ಯದರ್ಶಿ ಗೋಪಾಲಕೃಷ್ಣ ನಾಯಕ ಟಿಕೆಟ್ ಆಕಾಂಕ್ಷಿಯಾಗಿದ್ದರು.
……….
ಇನ್ನು ಮೂರು ಕಡೆ ಕುತೂಹಲ
ಕುಮಟಾ, ಶಿರಸಿ ಹಾಗೂ ಯಲ್ಲಾಪುರ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೆ ಇನ್ನೂ ಬಾಕಿ ಇದೆ. ಪ್ರಮುಖವಾಗಿ ಕುಮಟಾ ಕ್ಷೇತ್ರದ ಚಿತ್ರಣ ತೀವ್ರ ಕುತೂಹಲ ಕೆರಳಿಸಿದೆ. ಮಾಜಿ ಶಾಸಕಿ ಶಾರದಾ ಶೆಟ್ಟಿ ಸೇರಿ ಒಟ್ಟಾರೆ 13 ಅಭ್ಯರ್ಥಿಗಳು ಕೈ ಟಿಕೆಟ್‌ಗೆ ಅರ್ಜಿ ಸಲ್ಲಿಸಿ ತೀವ್ರ ಪೈಪೋಟಿ ನಡೆಸಿದ್ದರು. ಇತ್ತೀಚೆಗೆ ಕಾಂಗ್ರೆಸ್ ನಾಯಕಿ, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವಾ ಅವರ ಪುತ್ರ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಿವೇದಿತ ಆಳ್ವಾ ಕೂಡ ತಾನು ಆಕ್ಷಾಂಕ್ಷಿ ಎಂದು ಓಡಾಟ ನಡೆಸಿದ್ದು, ಕುಮಟಾ ಕಾಂಗ್ರೆಸ್ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. ಕುಮಟಾದ ಕೈ ಟಿಕೆಟ್ ರೋಚಕ ಪೈಪೋಟಿಗೆ ಟ್ವಿಸ್ಟ್ ದೊರಕಿದೆ. 13 ಜನರ ಜಗಳದಲ್ಲಿ 14 ನೇ ಅಭ್ಯರ್ಥಿ ಲಾಭ ಪಡೆಯುವನೋ ಎಂಬ ಅನುಮಾನವೂ ಮೂಡಿದೆ.
ಶಿರಸಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಭೀಮಣ್ಣ ನಾಯ್ಕ, ಮುಖಂಡ ವೆಂಕಟೇಶ ಹೆಗಡೆ ಹೊಸಬಾಳೆ ಅವರ ಹೆಸರುಗಳಿವೆ. ಕಾಗೇರಿ ಎದುರಿಸುವ ಘಟ್ಟಿಗನ್ಯಾರು ಎಂಬ ಪ್ರಶ್ನೆಗೆ ಇದುವರೆಗೂ ಕೈ ನಾಯಕರಿಗೆ ಉತ್ತರ ದೊರಕಿದಂತಿಲ್ಲ. ಇನ್ನು ಯಲ್ಲಾಪುರದಲ್ಲಿ ಖಾಲಿಯಾಗಿದ್ದ ಕಾಂಗ್ರೆಸ್ ಮನೆಗೆ ಜೀವ ತುಂಬಿದವರು ಮಾಜಿ ಶಾಶಕ ವಿ.ಎಸ್.ಪಾಟೀಲ ಹಾಗೂ ಶ್ರೀನಿವಾಸ ಭಟ್ ಧಾತ್ರಿ. ಇತ್ತೀಚೆಗಷ್ಟೇ ಇಬ್ಬರೂ ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ್ದಾರೆ. ಇದರಿಂದ ಮೊದಲ ಪಟ್ಟಿಯಲ್ಲಿ ಯಲ್ಲಾಪುರ ಕ್ಷೇತ್ರದ ಹೆಸರೂ ಬಂದಿಲ್ಲ.