ಟಿಎಪಿಸಿಎಂಎಸ್ ಚುಕ್ಕಾಣಿ ಹಿಡಿದ ಕಾಂಗ್ರೆಸ್

IMG_0020
Published on

ನಾಗಮಂಗಲ: ಟಿಎಪಿಸಿಎಂಎಸ್‌ನ 5 ವರ್ಷ ಅವಧಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಸ್ಪಷ್ಟ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಯಶಸ್ವಿಯಾಗಿದ್ದಾರೆ.

ಒಟ್ಟು 15 ನಿರ್ದೇಶಕ ಸದಸ್ಯರ ಬಲ ಇರುವ ಆಡಳಿತ ಮಂಡಳಿಯಲ್ಲಿ ಅವಿರೋಧವಾಗಿ 8 ನಿರ್ದೇಶಕರು ಆಯ್ಕೆಯಾಗಿದ್ದು, ಉಳಿದ 7 ಸ್ಥಾನಗಳಿಗೆ ಬಿರುಸಿನಿಂದ ಚುನಾವಣೆ ನಡೆಯಿತು. 7 ಕ್ಷೇತ್ರಗಳ ಪೈಕಿ 6 ಕ್ಷೇತ್ರಗಳಲ್ಲಿ ಸಚಿವ ಎನ್.ಚಲುವರಾಯಸ್ವಾಮಿ ಬಣದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಬೇರಿ ಸಾಧಿಸಿದರೆ, ಒಂದು ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಗೆಲುವು ಸಾಧಿಸಿದರು.

8 ನಿರ್ದೇಶಕರು ಅವಿರೋಧವಾಗಿ ಆಯ್ಕೆ:

ಕೃಷಿ ಪತ್ತಿನ ಸಹಕಾರ ಸಂಘಗಳ ಕ್ಷೇತ್ರದಿಂದ ಎಲೆಕೊಪ್ಪ ದಿನೇಶ್, ಬ್ರಹ್ಮದೇವರಹಳ್ಳಿ ಬಿ.ಎಂ.ಪ್ರಕಾಶ್, ಅದ್ದಿಹಳ್ಳಿ ಕುಮಾರ್ ಹಾಗೂ ಎಚ್.ಬೊಮ್ಮನಹಳ್ಳಿ ಮರೀಗೌಡ ಆಯ್ಕೆಯಾದರೆ, ಸರ್ಕಾರಿ ನಾಮನಿರ್ದೇಶಿತರಾಗಿ ಬಿಂಡಿಗನವಿಲೆ ಮೋಹನ್ ಕುಮಾರ್, ಡಿಸಿಸಿ ಬ್ಯಾಂಕ್ ನಿಂದ ನರಸಿಂಹಯ್ಯ, ಸಹಕಾರ ಇಲಾಕೆ ಉಪನಿಂಬಂಧಕರಾದ ನಾಗಭೂಷಣ್ ಹಾಗೂ ನಾಗಮಂಗಲ ಪುರಸಭೆ ಕ್ಷೇತ್ರದಿಂದ ಆಶಾ ಸೇರಿದಂತೆ ಒಟ್ಟು 8 ಜನರು ಅವಿರೋಧವಾಗಿ ಆಯ್ಕೆಯಾದರು.

ಮತದಾನ ಮಾಡಿದ ಸಚಿವ:

ನಾಗಮಂಗಲ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಬ್ರಹ್ಮದೇವರಹಳ್ಳಿ ಕ್ಷೇತ್ರದ ಮತಗಟ್ಟೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮತದಾನ ಮಾಡಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗೆ ಶುಭಕೋರಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ ದೇವಲಾಪುರ ಮತಕ್ಷೇತ್ರದ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ಕ್ಷೇತ್ರವಾರು ಮತದಾನ ವಿವರ:

ಒಟ್ಟು 7 ಕ್ಷೇತ್ರಗಳಿಂದ 5156 ಮತದಾರರಿದ್ದು, ಈ ಪೈಕಿ 4975 ಮತ ಚಲಾವಣೆಗೊಂಡವು. ಚಿಣ್ಯ ಕ್ಷೇತ್ರದ ಒಟ್ಟು 1106 ಮತಗಳ ಪೈಕಿ 1084 ಮತಗಳು ಚಲಾವಣೆಯಾದವು. ಬ್ರಹ್ಮದೇವರಹಳ್ಳಿ ಕ್ಷೇತ್ರದ ಒಟ್ಟು 964 ಮತಗಳ ಪೈಕಿ 937 ಮತಗಳು ಚಲಾವಣೆಯಾದರೆ, ದೇವಲಾಪುರ ಕ್ಷೇತ್ರದ 840 ಮತಗಳ ಪೈಕಿ 795 ಮತಗಳು ಚಲಾವಣೆಯಾದವು. ಮಾಯಿಗೋನಹಳ್ಳಿ ಕ್ಷೇತ್ರದ ಒಟ್ಟು 657 ಮತಗಳ ಪೈಕಿ 627 ಮತಗಳು ಚಲಾವಣೆಗೊಂಡವು. ಬಿಂಡಿಗನವಿಲೆ ಕ್ಷೇತ್ರದ ಒಟ್ಟು 621 ಮತಗಳ ಪೈಕಿ 599 ಮತಗಳು ಚಲಾವಣೆಗೊಂಡವು. ಗೊಂಡೇನಹಳ್ಳಿ ಕ್ಷೇತ್ರದ ಒಟ್ಟು 487 ಮತಗಳ ಪೈಕಿ 472 ಮತಗಳು ಚಲಾವಣೆಗೊಂಡವು. ಬೆಳ್ಳೂರು ಕ್ಷೇತ್ರದ ಒಟ್ಟು 481 ಮತಗಳ ಪೈಕಿ 461 ಮತಗಳು ಚಲಾವಣೆಗೊಂಡವು. ಒಟ್ಟಾರೆ 181 ಮತಗಳು ಮಾತ್ರ ಚಲಾವಣೆಯಾಗಲಿಲ್ಲ.

ಚುನಾವಣೆಯಲ್ಲಿ ಗೆಲುವು ಸಾಧಿಸಿದವರು:

ಚಿಣ್ಯ ಕ್ಷೇತ್ರದ ಪ್ರದೀಪ್ ವಿರುದ್ದ ಕೃಷ್ಣೇಗೌಡ ಗೆಲುವು ಸಾಧಿಸಿದರೆ, ದೇವಲಾಪುರ ಕ್ಷೇತ್ರದಿಂದ ಯಶೋದಮ್ಮ ವಿರುದ್ದ ವಸಂತಮಣಿ ಗೆಲವು ಸಾಧಿಸಿದರು. ಮಾಯಿಗೋನಹಳ್ಳಿ ಕ್ಷೇತ್ರದಿಂದ ಮಂಜುನಾಥ್ ವಿರುದ್ದ ಧನರಾಜ್, ಬಿಂಡಿಗನವಿಲೆ ಕ್ಷೇತ್ರದಿಂದ ಯೋಗೇಶ್ ವಿರುದ್ದ ಎನ್.ಟಿ.ಕೃಷ್ಣಮೂರ್ತಿ, ಗೊಂಡೇನಹಳ್ಳಿ ಕ್ಷೇತ್ರದ ಸಿದ್ದರಾಜು ವಿರುದ್ಧ ಸುರೇಂದ್ರ ಬೆಳ್ಳೂರು ಕ್ಷೇತ್ರದಿಂದ ಕೆಂಚೇಗೌಡ ವಿರುದ್ಧ ಲಕ್ಷ್ಮಣಗೌಡ ಹಾಗೂ ಬ್ರಹ್ಮದೇವರಹಳ್ಳಿ ಕ್ಷೇತ್ರದ ಗೀತಾ ದಾಸೇಗೌಡ ವಿರುದ್ಧ ಉಜ್ವಲ ಮಂಜುನಾಥ್ ಗೆಲುವು ಸಾಧಿಸಿದರು. ಚುನಾವಣೆ ನಡೆದ ಒಟ್ಟು 7 ಸ್ಥಾನಗಳ ಪೈಕಿ 6 ಕಾಂಗ್ರೆಸ್ ಬೆಂಬಲಿತ ಹಾಗೂ 1 ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net