ಚನ್ನಪಟ್ಟಣ ಕಬ್ಜಾಕ್ಕೆ ಕೈ ರಣತಂತ್ರ

channapatna-toys-2
Published on

* ಬೊಂಬೆನಾಡಿನ ಜನರ ಮನಸ್ಸು ಗೆಲ್ಲಲು ಅಭಿವೃದ್ಧಿ ಮಂತ್ರ

*  ಕ್ಷೇತ್ರಕ್ಕೆ ಕಾಂಗ್ರೆಸ್​ ಸರ್ಕಾರದ ಅನುದಾನದ ಹೊಳೆ

ಅಭಿಲಾಷ್​ ತಿಟ್ಟಮಾರನಹಳ್ಳಿ ಚನ್ನಪಟ್ಟಣ

ಉಪಚುನಾವಣೆ ಹೊಸ್ತಿಲಿನಲ್ಲಿರುವ ಕ್ಷೇತ್ರ ಕ್ಕೆ ಕಾಂಗ್ರೆಸ್​ ಸರ್ಕಾರ ಅನುದಾನದ ಹೊಳೆಯನ್ನೇ ಹರಿಸಿದೆ. ಅಭಿವೃದ್ಧಿಯ ಮೂಲಕ ಬೊಂಬೆನಾಡಿನ ಜನರ ಮನಸ್ಸು ಗೆಲ್ಲುವುದು ಕೈ ಪಾಳಯದ ಯೋಜನೆಯಾಗಿದೆ.

ಹೌದು. ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಎಚ್​.ಡಿ.ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಕ್ಷೇತ್ರದ ಶಾಸಕ ಸ್ಥಾನದ ಚುನಾವಣೆಗೆ ದಿನಗಣನೆ ಆರಂಭಗೊಂಡಿದೆ. ಈ ಚುನಾವಣೆಯಲ್ಲಿ ೇತ್ರವನ್ನು ಕಬ್ಜಾ ಮಾಡಲು ಕಾಂಗ್ರೆಸ್​ ತಂತ್ರ ರೂಪಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಅಧಿಕಾರ ಬಲ ಬಳಸಿಕೊಂಡು ಅಭಿವೃದ್ಧಿಗೆ ಹೆಚ್ಚಿನ ಅನುದಾನ ತರಲಾಗಿದೆ.

450 ಕೋಟಿ ರೂ. ಅನುದಾನ!

ೇತ್ರದ ಅಭಿವೃದ್ಧಿಗೆ ರಾಜ್ಯಸರ್ಕಾರ 450 ಕೋಟಿ ರೂ.ಗೂ ಹೆಚ್ಚು ಅನುದಾನ ಬಿಡುಗಡೆ ಮಾಡಿದೆ. ಈಗಾಗಲೇ ಶೇ.75 ಕಾಮಗಾರಿಗಳ ಟೆಂಡರ್​ ಪ್ರಕ್ರಿಯೆ ಮುಕ್ತಾಯವಾಗಿದ್ದು, ಇನ್ನುಳಿದ ಶೇ.25 ಕಾಮಗಾರಿಗಳ ಟೆಂಡರ್​ ಪ್ರಕ್ರಿಯೆ ಪ್ರಗತಿಯಲ್ಲಿವೆ ಎಂಬ ಮಾಹಿತಿ ಲಭ್ಯವಾಗಿವೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಹಲವು ಕಾಮಗಾರಿಗಳ ಶಂಕುಸ್ಥಾಪನೆಗೆ ಈಗಾಗಲೇ ಮುಹೂರ್ತ ನಿಗದಿಯಾಗಿದೆ. ಇದರೊಂದಿಗೆ, ಲಾನುಭವಿಗಳಿಗೆ ನಿವೇಶನ ಹಂಚುವ ಕಾರ್ಯಕ್ಕೂ ಚಾಲನೆ ನೀಡಲಾಗುತ್ತಿದೆ. ಈ ಉಪಚುನಾವಣೆ ತಾಲೂಕಿನ ಅಭಿವೃದ್ಧಿ ಪರ್ವಕ್ಕೆ ಕಾರಣವಾಗಿದೆ.

ಅಭಿವೃದ್ಧಿ ಕಾರ್ಯಕ್ಕೆ ಮುಹೂರ್ತ ನಿಗದಿ?

ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆಗೆ ಮುಹೂರ್ತ ನಿಗದಿಯಾಗಿದ್ದು, ಸೆ.20 ರಂದು ಡಿಸಿಎಂ ಡಿ.ಕೆ.ಶಿವಕುಮಾರ್​ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ ತಾಲೂಕಿನ ವಿವಿಧ ಕಡೆ ಹಲವು ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಿದ್ದಾರೆ. ಇದರೊಂದಿಗೆ ಸೆ.21 ರಂದು ಸಚಿವರಾದ ಜಮೀರ್​ ಅಹಮದ್​ ಖಾನ್​ ಹಾಗೂ ರಹೀಂಖಾನ್​ ಅವರು ನಗರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದು, ಇದರೊಂದಿಗೆ, ನಿವೇಶನ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಿದ್ದಾರೆ. ಇದರೊಂದಿಗೆ, ನಗರದ ಬಹುದಿನದ ಬೇಡಿಕೆಯಾದ ಕ್ರೀಡಾಂಗಣ ಹಾಗೂ ಉದ್ಯಾನವನ ಸೇರಿ ಹಲವು ಕಾಮಗಾರಿಗಳಿಗೂ ಚಾಲನೆ ನೀಡಲಿದ್ದಾರೆ.

ಚಾಲನೆ ನೀಡಲಿರುವ ಕಾಮಗಾರಿಗಳ ಪಟ್ಟಿ!

* ನಗರದ ಐಡಿಎಂಸಿ ಲೇಔಟ್​ ಹಾಗೂ ಪಟ್ಲು ಗ್ರಾಮದಲ್ಲಿ ಮೊದಲ ಹಂತವಾಗಿ 1 ಸಾವಿರ ನಿವೇಶನಗಳ ಹಂಚಿಕೆ. (ಲಾಟರಿ ಮೂಲಕ)

* 5 ಸಾವಿರ ಮನೆಗಳು ಬಿಡುಗಡೆಯಾಗಿದ್ದು, ಮೊದಲ ಹಂತವಾಗಿ 2.5 ಸಾವಿರ ಮನೆಗಳಿಗೆ ಅನುಮೋದನೆ.

* ನಗರದ ಕಸ ವಿಲೇವಾರಿಗೆ ವಂದಾರಗುಪ್ಪೆ ಬಳಿ ಜಾಗ ನಿಗದಿ. ಕಸ ವಿಲೇವಾರಿ ಘಟಕಕ್ಕೆ 5 ಕೋಟಿ ರೂ. ಅನುದಾನ.

* ಕುಡಿನೀರು ಕಟ್ಟೆ ಬಳಿ 12 ಎಕರೆ ವಿಸ್ತೀರ್ಣದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ 9 ಕೋಟಿ ರೂ. ಅನುದಾನ

* ನಗರದ ಶೆಟ್ಟಿಹಳ್ಳಿ ಕೆರೆ ಅಭಿವೃದ್ಧಿ ಹಾಗೂ ವಾಹುವಿಹಾರ ಪಾಥ್​ ನಿರ್ಮಾಣಕ್ಕೆ 9 ಕೋಟಿ ರೂ ಅನುದಾನ.

* ನಗರದ ಪೆಟ್ಟಾ ಸ್ಕೂಲ್​ ಬಳಿ ಆಟದ ಮೈದಾನ ನಿರ್ಮಾಣಕ್ಕೆ ಐದು ಕೋಟಿ ಅನುದಾನ,

* ನಗರದಲ್ಲಿ ಕುಡಿಯುವ ನೀರು ಸೌಲಭ್ಯಕ್ಕೆ 36 ಕೋಟಿ ರೂ ಅನುದಾನ.

* ಯುಜಿಡಿ ಕಾಮಗಾರಿಗೆ 99 ಕೋಟಿ ರೂ. ಅನುದಾನ.

* ನಗರ ಪ್ರದೇಶದ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಪ್ರತಿವಾರ್ಡ್​ಗೂ 1 ಕೋಟಿ ಯಂತೆ 31 ಕೋಟಿ ರೂ. ಅನುದಾನ.

* ನಗರಾಭಿವೃದ್ಧಿ 22 ಕೋಟಿ ರೂ. ಅನುದಾನ.

* ಅಲ್ಪಸಂಖ್ಯಾತ ಬಡಾವಣೆಗಳ ರಸ್ತೆ ಮತ್ತು ಚರಂಡಿಗೆ 16 ಕೋಟಿ ರೂ.

* ಲೋಕೋಪಯೋಗಿ ಇಲಾಖೆಯಿಂದ ತಾಲೂಕಿನ ವಿವಿಧ ರಸ್ತೆಗಳ ಅಭಿವೃದ್ಧಿಗೆ 33 ಕೋಟಿ ರೂ.

* ನೀರಾವರಿ ಇಲಾಖೆಗೆ ಪೈಪ್​ಲೈನ್​ ಸೇರಿ ಇನ್ನಿತರ ಕಾಮಗಾರಿ ಕೈಗೊಳ್ಳಲು 43 ಕೋಟಿ ರೂ.

* 115 ಕೋಟಿ ರೂ ವೆಚ್ಚದಲ್ಲಿ ತಾಲೂಕಿನ ಎಂಟು ಕಡೆ ಸೇತುವೆ ಕಂ ಬ್ಯಾರೇಜ್​ ನಿರ್ಮಾಣ.

* ತಾಲೂಕಿನ ಸರಗೂರು ಬಳಿ 15 ಕೋಟಿ ರೂ. ವೆಚ್ಚದಲ್ಲಿ ಸೇತುವೆ ನಿರ್ಮಾಣ.

* ಜಿಪಂ ವತಿಯಿಂದ ಗ್ರಾಮೀಣ ಭಾಗದ ರಸ್ತೆ ಮತ್ತು ಚರಂಡಿಗಳ ನಿರ್ಮಾಣಕ್ಕೆ 39 ಕೋಟಿ ರೂ. ಅನುದಾನ.

* ಸೋಗಾಲ, ಭೂಹಳ್ಳಿ, ಹುಣಸನಹಳ್ಳಿ ಹಾಗೂ ಕೂಡ್ಲೂರು ಗ್ರಾಮದಲ್ಲಿ ಸಮುದಾಯ ಭವನಗಳ ನಿರ್ಮಾಣಕ್ಕೆ 9.80 ಕೋಟಿ ರೂ. ಅನುದಾನ.

* ಮುಜರಾಯಿ ಇಲಾಖೆಯ ದೇವಸ್ಥಾನಗಳ ಅಭಿವೃದ್ಧಿಗೆ 5.75 ಕೋಟಿ ರೂ.

ತಾಲೂಕು ಅಭಿವೃದ್ಧಿಯಿಂದ ಸಾಕಷ್ಟು ವಂಚಿತವಾಗಿದೆ. ಈ ತಾಲೂಕನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬೇಕು ಎಂಬುದು ಡಿ.ಕೆ.ಸಹೋದರರ ಆಶಯವಾಗಿದೆ. ಚುನಾವಣೆಗೂ ಅಭಿವೃದ್ಧಿಗೂ ಯಾವುದೇ ಸಂಬಂಧವಿಲ್ಲ. ಡಿಸಿಎಂ ಅವರು ತಮಗೆ ಇರುವ ಅಧಿಕಾರವನ್ನು ಬಳಸಿಕೊಂಡು ಕ್ಷೇತ್ರದಲ್ಲಿ ಶಾಶ್ವತ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಇದಕ್ಕೆ ಮಾಜಿ ಸಂಸದ ಡಿ.ಕೆ.ಸುರೇಶ್​ ಅವರ ಒತ್ತಾಸೆಯಾಗಿದ್ದಾರೆ.

> ರುನಂದನ್​ ರಾಮಣ್ಣ, ಬಿಎಂಐಸಿಎಪಿಎ, ಅಧ್ಯಕ್ಷ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net