ಕಾಂಗ್ರೆಸ್ ರಿವರ್ಸ್ ಆಪರೇಷನ್: ಪಕ್ಷಕ್ಕೆ ವಾಪಸಾಗುವ ಇಂಗಿತ ವ್ಯಕ್ತಪಡಿಸಿದ 15 ಮುಖಂಡರು

DKS 5 June 20
Published on

ಬೆಂಗಳೂರು: ಪಕ್ಷದಿಂದ ದೂರಾಗಿರುವ ಮುಖಂಡರನ್ನು ಪುನಃ ಕರೆತರುವ ಪ್ರಯತ್ನ ಆರಂಭಿಸಿರುವ ಕಾಂಗ್ರೆಸ್​ಗೆ ಆರಂಭಿಕ ಮುನ್ನಡೆ ಸಿಕ್ಕಿದೆ.

ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಪಕ್ಷಕ್ಕೆ ಬರುವವರನ್ನು ಕರೆತರಲು ಅಲ್ಲಂ ವೀರಭದ್ರಪ್ಪ ನೇತೃತ್ವದಲ್ಲಿ ಸಮಿತಿ ರಚಿಸಿದ್ದರು. ಈಗಾಗಲೇ 15 ಮುಖಂಡರು ಪಕ್ಷಕ್ಕೆ ಹಿಂದಿರುಗುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ. ಇನ್ನಷ್ಟು ಮಂದಿ ಸಮಿತಿಯನ್ನು ಸಂರ್ಪಸುವ ಪ್ರಯತ್ನ ಮಾಡಿದ್ದಾರೆ. ಪದಗ್ರಹಣ ಕಾರ್ಯಕ್ರಮ ಮುಗಿದ ಬಳಿಕ ಪಕ್ಷಕ್ಕೆ ಕರೆ ತರುವ ಪ್ರಕ್ರಿಯೆ ಚುರುಕುಗೊಳ್ಳಲಿದೆ. ಜತೆಗೆ ಜಿಲ್ಲಾ ಮಟ್ಟದಲ್ಲಿ ವರದಿ ಕೇಳಿದ್ದೇವೆ. ಪಕ್ಷಕ್ಕೆ ಆಗಮಿಸುವವರಿಂದ ಆಗುವ ಲಾಭ ನಷ್ಟದ ಚರ್ಚೆ ಆಗಬೇಕು ಎಂದು ಸಮಿತಿ ಸದಸ್ಯರು ಹೇಳಿದ್ದಾರೆ. ಜಿಲ್ಲಾ ಹಂತದ ಮುಖಂಡರನ್ನೂ ಪಕ್ಷಕ್ಕೆ ಕರೆತರುವ ಪ್ರಯತ್ನಗಳೂ ನಡೆದಿದೆ.

ಚುನಾವಣೆ ಟಿಕೆಟ್ ಕೈತಪ್ಪಿದ ಸಂದರ್ಭ, ಸ್ಥಳೀಯ ನಾಯಕತ್ವದ ತಿಕ್ಕಾಟ, ನಿರಂತರವಾಗಿ ಅವಕಾಶ ಸಿಗದೇ ಮೂಲೆಗುಂಪಾದವರು, ಆಮಿಷಕ್ಕೆ ಒಳಗಾಗಿ ಪಕ್ಷ ಬಿಟ್ಟು ಹೋದವರು, ಬೇರೆ ಪಕ್ಷದಲ್ಲಿ ಬಹು ನಿರೀಕ್ಷೆ ಇಟ್ಟುಕೊಂಡು ಹೋಗಿ ಭ್ರಮನಿರಸನಗೊಂಡವರು, ಈ ಹಿಂದೆ ಪಕ್ಷದ ನಾಯಕತ್ವದ ಬಗ್ಗೆ ಬೇಸರಗೊಂಡು ತೊರೆದವರು, ಬೇರೆ ಪಕ್ಷದಲ್ಲಿ ಇರಲಾಗದೇ ಅವಕಾಶಕ್ಕೆ ಕಾಯುತ್ತಿರುವವರನ್ನು ಗುರಿಮಾಡಿ ಈ ಕಾರ್ಯಾಚರಣೆ ಮಾಡಲಾಗುತ್ತಿದೆ.

ಸಾಮಾನ್ಯವಾಗಿ ಚುನಾವಣೆಗೆ ಮುನ್ನ ಪಕ್ಷ ಸೇರ್ಪಡೆ ಕಾರ್ಯಕ್ರಮ ಬಿರುಸಾಗಿ ನಡೆಯುತ್ತದೆ. ಆದರೆ, ಈ ವೇಳೆ ಆತುರದಲ್ಲಿ ಕೈಗೊಂಡ ಅಥವಾ ಒತ್ತಡಕ್ಕೆ ಸಿಲುಕಿ ಪಕ್ಷಕ್ಕೆ ಸೇರಿಸಿಕೊಂಡಾಗ ನಷ್ಟವೂ ಆಗಿದ್ದಿದೆ. ಈ ಹಿನ್ನೆಲೆಯಲ್ಲಿ ಈಗಲೇ ಅವಕಾಶದ ಬಾಗಿಲು ತೆರೆದಿಡುವ ಪ್ರಯತ್ನ ಎಂದು ಅಲ್ಲಂ ವೀರಭದ್ರಪ್ಪ ಸಮಿತಿಯ ಸದಸ್ಯರೊಬ್ಬರು ತಿಳಿಸಿದರು.

ಸಮಿತಿಯ ಸದಸ್ಯರೆಲ್ಲರೂ ರಾಜ್ಯದ ವಿವಿಧ ಭಾಗಕ್ಕೆ ಸೇರಿದವರು ಮತ್ತು ಅಲ್ಲಿ ಪ್ರಭಾವ ಹೊಂದಿದವರು. ಅವರೆಲ್ಲರೂ ತಮ್ಮ ತಮ್ಮ ಭಾಗದಲ್ಲಿ ಪಕ್ಷಕ್ಕೆ ಸೆಳೆಯಬಹುದಾದವರನ್ನು ಗುರುತು ಮಾಡಿ, ಮನವೊಲಿಸುವ ಕೆಲಸ ಮಾಡುತ್ತಾರೆ.

ಬಿ.ಎ.ಹಸನಬ್ಬ ಅವರಿಗೆ ಸಂಚಾಲಕರಾಗಿ ಸಮಿತಿಯ ಜವಾಬ್ದಾರಿ ನೀಡಿದ್ದು, ವಿ.ಮುನಿಯಪ್ಪ, ಅಜಯ್ಕುಮಾರ್ ಸರ್​ನಾಯಕ್, ಅಭಯಚಂದ್ರ, ಧ್ರುವನಾರಾಯಣ, ಬಿ.ಎನ್.ಚಂದ್ರಪ್ಪ, ವಿ.ವೈ ಘೋರ್ಪಡೆ, ಸಂಪತ್ ರಾಜ್, ಸತೀಶ್ ಸೈಲ್, ಕೃಪಾ ಆಳ್ವ, ಪ್ರಫುಲ್ಲಾ ಮಧುಕರ್ ತಮ್ಮ ಭಾಗದಲ್ಲಿನ ಪಕ್ಷಕ್ಕೆ ಬರುವವರನ್ನು ಪರಾಮರ್ಶೆಗೊಳಪಡಿಸಲಿದ್ದಾರೆ.

ಈಗಾಗಲೆ 15 ಮಂದಿ ಆಕಾಂಕ್ಷಿಗಳು ಪಕ್ಷಕ್ಕೆ ಬರಲು ಸಿದ್ಧರಿದ್ದಾರೆ. ಪದಗ್ರಹಣ ಕಾರ್ಯಕ್ರಮದ ಹಿನ್ನೆಲೆ ಈ ಪ್ರಕ್ರಿಯೆಯನ್ನು ಮುಂದೂಡಿದ್ದೇವೆ. ಅದು ಮುಗಿದ ನಂತರ ಚಾಲನೆ ಕೊಡುತ್ತೇವೆ. | ಹಸನಬ್ಬ ಸಮಿತಿ ಸಂಚಾಲಕ

ಆಲೋಚಿಸಿ ಮರು ಅವಕಾಶ?

ಯಾರೋ ಪಕ್ಷಕ್ಕೆ ಬರುತ್ತಾರೆಂದ ಕೂಡಲೆ ನಾವು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಸಾಧ್ಯವಿಲ್ಲ. ಅಥವಾ ಯಾರನ್ನೂ ಏಕಾಏಕಿ ಕರೆತರಲು ಸಾಧ್ಯವಿಲ್ಲ. ಒಂದು ವೇಳೆ ಹೀಗೆ ಏಕಾಏಕಿ ಪಕ್ಷಕ್ಕೆ ಸೇರಿಸಿಕೊಂಡರೆ ಪಕ್ಷದಲ್ಲಿ 30-40 ವರ್ಷ ಇದ್ದವರ ಪಕ್ಷ ಬಿಟ್ಟು ಹೋಗಬಹುದು. ಇದರಿಂದ ಪಕ್ಷಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತದೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿ ಆಲೋಚಿಸಿ ತೀರ್ಮಾನ ಮಾಡಲು ಸಮಿತಿ ರಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿಜಯವಾಣಿಗೆ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net