

ರಾಮನಗರ : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ರಾಮನಗರದಲ್ಲಿ ಪ್ರತಿಭಟನೆ ನಡೆಸಿ ಅಪರ ಜಿಲ್ಲಾಧಿಕಾರಿ ಮುಖಾಂತರ ರಾಷ್ಟ್ರಪತಿಗೆ ಮನವಿ ಪತ್ರ ಸಲ್ಲಿಸಿದರು.
ರಾಮನಗರದ ಜಿಲ್ಲಾ ಕ್ರೀಡಾಂಗಣದಿಂದ ಶಾಸಕ ಇಕ್ಬಾಲ್ ಹುಸೇನ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿ ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗಿದರು.
ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರ ಕಾಂಗ್ರೆಸ್ ಮುಖಂಡರು ರಾಜ್ಯಪಾಲರು ಬಿಜೆಪಿ ನಾಯಕರ ಕೈಬೊಂಬೆಯಾಗಿದ್ದಾರೆ. ರಾಜ್ಯದಲ್ಲಿ ಜನಪರ ಆಡಳಿತ ನೀಡುತ್ತಿರುವ ನಮ್ಮ ಸರ್ಕಾರಕ್ಕೆ ಸಿಗುತ್ತಿರುವ ಜನಾಭಿಪ್ರಾಯವನ್ನು ಸಹಿಸಲಾಗದೆ ಸುಳ್ಳು ಪ್ರಕರಣಕ್ಕೆ ಸಿಲುಕಿಸುವ ಹುನ್ನಾರ ನಡೆಸುತ್ತಿದ್ದಾರೆ. ಬಹುಮತ ಪಡೆದಿರುವ ಸರ್ಕಾರದ ಮುಖ್ಯಮಂತ್ರಿಯ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೆ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ, ರಾಜ್ಯಪಾಲರು ಪ್ರಜಾಪ್ರಭುತ್ವ ವಿರೋಧಿ ನಡೆ ಅನುಸರಿಸುತ್ತಿದ್ದಾರೆ. ಇದರ ಹಿಂದೆ ಬಿಜೆಪಿ ಮತ್ತು ಜೆಡಿಎಸ್ ನಾಯಕರ ಚಿತಾವಣೆ ಇದೆ.
ಎನ್‌ಡಿಎ ಮುಖಂಡರು ಕೇಂದ್ರ ಸರ್ಕಾರ ತಮ್ಮದು ಎಂಬ ಕಾರಣಕ್ಕೆ ರಾಜಭವನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜಭವನ ರಾಜಕೀಯ ಮುಖಂಡರ ಕೈಬೊಂಬೆಯಾಗಿರುವುದು ವಿಷಾದನೀಯ ಎಂದು ಈ ಸಂಧರ್ಭದಲ್ಲಿ ಕಾಂಗ್ರೇಸ್ ಕಾರ್ಯಕರ್ತರು ಮುಕಂಡರು ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ತಡೆ : ಮೆರವಣಿಗೆ ಗೌಸಿಯಾ ಕಾಲೇಜು ಮುಂಭಾಗಕ್ಕೆ ಬರುತ್ತಲೇ ಮಾನವ ಸರಪಳಿ ರಚಿಸಿ ಏಕಾಏಕಿ ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರು ಮೈಸೂರು ರಸ್ತೆ ತಡೆ ನಡೆಸಿದರು. ಈ ವೇಏಳೆ ಸುಮರು ಅರ್ಧಗಂಟೆ ಸಂಚಾರ ವ್ಯತ್ಯಯವುಂಟಾಗಿತ್ತು. ನಂತರ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ರಸ್ತೆ ತಡೆ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ವಾಗ್ದಾಳಿ : ಶಾಸಕ ಇಕ್ಬಾಲ್ ಹುಸೇನ್ ಪ್ರತಿಭಟನೆ ಸಂಧರ್ಬದಲ್ಲಿ ಮಾತನಾಡಿ ರಾಜ್ಯದಲ್ಲಿ ದ್ವೇಷದ ರಾಜಕಾರಣ ಹೆಚ್ಚಾಗಿದೆ. ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ ಬಿಜೆಪಿ ನಾಯಕರ ವಿರುದ್ಧವೂ ಹಲವು ದೂರುಗಳಿವೆ. ಇವೆಲ್ಲ ಕಡತಗಳು ರಾಜಭವನದಲ್ಲಿ ಧೂಳು ಹಿಡಿಯುತ್ತಿರುವಾಗ, ಭ್ರಷ್ಟಾಚಾರ ರಹಿತವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವ ಮೂಲಕ ರಾಜ್ಯಪಾಲರು ರಾಜಕೀಯ ಷಡ್ಯಂತ್ರ ನಡೆಸುತ್ತಿದ್ದಾರೆ. ತರಾತುರಿಯಲ್ಲಿ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಪ್ರಜಾಪ್ರಭುತ್ವದ ಕಗ್ಗೊಲೆ ರಾಜ್ಯಪಾಲರು ಗೌರ್ನರ್ ಕೆಲಸ ಮಾಡುವುದನ್ನು ಬಿಟ್ಟು ಗುಲಾಮರ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಸಿ.ಎಂ. ಲಿಂಗಪ್ಪ, ಎಂ.ಸಿ. ಅಶ್ವತ್ಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್. ಗಂಗಾಧರ್, ಏಂಐಸಿಸಿ ಮಾಜಿ ಅಧ್ಯಕ್ಷ ಶೇಷಾದ್ರಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ವಿಜಯ್ ದೇವ್, ಮಾಜಿ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ಯರೇಹಳ್ಳಿ ಮಂಜು, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್, ರಾಮನಗರ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಚೇತನ್‌ಕುಮಾರ್ ಮುಖಂಡರಾದ ಸಿಎನ್‌ಆರ್ ವೆಂಕಟೇಶ್, ರಾಜಶೇಖರ್, ದುಂತೂರು ವಿಶ್ವನಾಥ್, ಪುಟ್ಟರಾಜು, ರೈಡ್ ನಾಗರಾಜು, ಶ್ರೀಕಂಠು, ವಿಜಯಕುಮಾರಿ, ನಾಗಮ್ಮ, ಷರೀಫ್, ಆಯಿಷಾ, ಗಿರಿಜಮ್ಮ, ಪವಿತ್ರ, ಪುಟ್ಟರಾಜು, ಗಿರೀಶ್, ರೇಣುಕಾಪ್ರಸಾದ್, ಜಯಲಕ್ಷ್ಮಮ್ಮ ಮುಂತಾದವರಿದ್ದರು