

ಸರಗೂರು: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವಿನೂತನ ಮಾದರಿಯಲ್ಲಿ ಅಧಿಕಾರ ಪದಗ್ರಹಣ ಕಾರ್ಯಕ್ರಮ ನಡೆಯುತ್ತಿದೆ. ಇದಕ್ಕೆ ಎಲ್ಲರೂ ಸಹಕರಿಸಬೇಕು ಎಂದು ಸರಗೂರು ಕ್ಷೇತ್ರದ ಯೂತ್ ಕಾಂಗ್ರೆಸ್ ಅಧ್ಯಕ್ಷ ಕಂದೇಗಾಲ ಶಿವರಾಜು ಹೇಳಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಯೂತ್ ಬ್ಲಾಕ್ ಕಾಂಗ್ರೆಸ್ ಎಚ್.ಡಿ.ಕೋಟೆ ಮತ್ತು ಸರಗೂರು ಸಮಿತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಮಾ.17ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಯೂತ್ ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಮಂಜುನಾಥಗೌಡ ಅವರು ಅಧಿಕಾರ ಸ್ವೀಕರಿಸಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಾಗೂ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಎರಡು ತಾಲೂಕಿನ ಬ್ಲಾಕ್ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿಸಬೇಕು ಎಂದು ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮನುಗನಹಳ್ಳಿ ಮಾದಪ್ಪ ಮಾತನಾಡಿ, ಕಾಂಗ್ರೆಸ್ ಪಕ್ಷವನ್ನು ಕಟ್ಟಿರುವುದು ಯುವಕರಿಂದ. ಈಗಿರುವ ರಾಜ್ಯ ನಾಯಕರು ಕೂಡ ಯೂತ್ ಸಂಘಟನೆ ಮಾಡಿಕೊಂಡು ಬಂದವರೇ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸೇರಿ ಹಲವು ನಾಯಕರು ಯೂತ್ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ನೀವು ಕೂಡ ಗ್ರಾಮ ಮಟ್ಟದಲ್ಲಿ ಉತ್ತಮವಾಗಿ ಪಕ್ಷ ಸಂಘಟನೆ ಮಾಡಿ ಉನ್ನತ ಸ್ಥಾನಕ್ಕೆ ಏರಬೇಕು ಎಂದು ತಿಳಿಸಿದರು.
ಗ್ಯಾರಂಟಿ ಅಧ್ಯಕ್ಷ ಚಾಮರಾಜು, ಎಚ್.ಡಿ.ಕೋಟೆ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಜರುದ್ದೀನ್, ಮಹಿಳಾ ಘಟಕದ ಅಧ್ಯಕ್ಷ ಸೌಮ್ಯ ಮಂಜುನಾಥ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಳಸೂರು ಬಸವರಾಜು, ಟೌನ್ ಅಧ್ಯಕ್ಷ ಸ್ಟುಡಿಯೋ ಪ್ರಕಾಶ್, ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಶಶಿ ಪಾಟೀಲ್, ಬ್ಲಾಕ್ ಉಪಾಧ್ಯಕ್ಷ ಮನೋಜ್, ಮಂಜುನಾಥ, ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಯಾಸಿನ್, ಜಿಲ್ಲಾ ಸಾಮಾಜಿಕ ಜಾಲತಾಣ ವಿಭಾಗದ ಕಾರ್ಯದರ್ಶಿ ಮೋಹನ್ ಕುಮಾರ್ ಎಂ ಸಿ, ವಿಜಯ್, ಹೈರಿಗೆ ಮಲ್ಲೇಶ್, ಮುಳ್ಳೂರು ಲೋಕೇಶ್, ಮಸಹಳ್ಳಿ ಸೂರ್ಯ ಕುಮಾರ್, ಮೊಳೆಯೂರು ಕಾವಲ್ ನಾಗೇಂದ್ರ ಮುಂತಾದವರು ಇದ್ದರು.