

ವಿಜಯವಾಣಿ ಸುದ್ದಿಜಾಲ ಗೌರಿಬಿದನೂರು
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸುವಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ರಾಜಕೀಯ ಮಾಡುತ್ತಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಆರೋಪಿಸಿದರು.
ನಗರದ ಡಾ.ಎಚ್.ಎನ್.ಕಲಾಭವನದಲ್ಲಿ ಮಂಜುನಾಥ ಕಂಪ್ಯೂಟರ್ರ್ಸ್, ನಾರಾಯಣ ತರಬೇತಿ ಸಂಸ್ಥೆಯ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ 13ನೇ ಬ್ಯಾಚ್‌ನ 120 ಫಲಾನುಭವಿಗಳಿಗೆ ಪ್ರಮಾಣ ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ದೂರದೃಷ್ಟಿಯನ್ನಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಭವಿಷ್ಯಕ್ಕೆ ತಕ್ಕಂತೆ ಶಿಕ್ಷಣ ಪದ್ಧತಿಯನ್ನು ಬದಲಿಸುವುದೇ ಕೇಂದ್ರದ ಉದ್ದೇಶವಾಗಿದೆ. ಬಹುತೇಕ ರಾಜ್ಯಗಳು ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುತ್ತಿವೆಯಾದರೂ ರಾಜ್ಯ ಕಾಂಗ್ರೆಸ್ ಸರ್ಕಾರ ಮಾತ್ರ ದುರುದ್ದೇಶದಿಂದ ವಿರೋಧಿಸುತ್ತಿದೆ. ಈ ವಿಚಾರದಲ್ಲಿ ಅನಗತ್ಯ ರಾಜಕೀಯ ಮಾಡುತ್ತಿದೆ ಎಂದು ಸಂಸದ ಸುಧಾಕರ್ ಹರಿಹಾಯ್ದರು.
ವಿಶ್ವಕರ್ಮ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ಪ್ರಥಮ
ವಿಶ್ವ ಕರ್ಮ ಯೋಜನೆಯಡಿ ನೋಂದಾಯಿಸಿಕೊಂಡವರಿಗೆ ಒಂದಕ್ಕಿಂತ ಹೆಚ್ಚು ಕೌಶಲಗಳ ತರಬೇತಿ ನೀಡಿ, ಉಪಕಸುಗಳನ್ನು ಕಲಿಸಲಾಗುತ್ತದೆ. ಇದರಿಂದ ಹೆಚ್ಚಿನ ಅವಕಾಶಗಳು ದೊರೆಯಲಿವೆ. ಅಲ್ಲದೇ ಲಾನುಭವಿಗಳಿಗೆ ಟೂಲ್ ಕಿಟ್ ಖರೀದಿಗಾಗಿ 15,000 ರೂ. ಸಹಾಯ ಧನ ಹಾಗೂ ಯಾವುದೇ ಭದ್ರತೆ ಇಲ್ಲದೆ 3 ಲಕ್ಷ ರೂ.ವರೆಗೆ ವಾರ್ಷಿಕ ಶೇ.5 ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯಲಿದೆ. ದೇಶದಲ್ಲಿ 3.5 ಲಕ್ಷ ಜನರು, ಅದರಲ್ಲೂ ಯೋಜನೆ ಅನುಷ್ಠಾನದಲ್ಲಿ ಕರ್ನಾಟಕ ಪ್ರಥಮ ಸ್ಥಾನದಲ್ಲಿದ್ದು, ರಾಜ್ಯದಲ್ಲಿ 83,000ಕ್ಕೂ ಹೆಚ್ಚು ಫಲಾನುಭವಿಗಳು ಅನುಕೂಲ ಪಡೆದಿದ್ದಾರೆ ಎಂದು ಸಂಸದರು ತಿಳಿಸಿದರು.
ಸ್ಥಳೀಯ ಮಾರುಕಟ್ಟೆ ಕಲ್ಪಿಸಲು ಆದ್ಯತೆ
ರಾಜ್ಯದಲ್ಲಿ ಮರಗೆಲಸ, ಟೈಲ್ಸ್ ಮತ್ತು ಗಾರೆ ಕೆಲಸಕ್ಕೂ ರಾಜಸ್ಥಾನ, ಉತ್ತರ ಪ್ರದೇಶ, ಬಿಹಾರ ಕಾರ್ಮಿಕರು ವಲಸೆ ಬರುತ್ತಿದ್ದಾರೆ. ಲಕ್ಷಾಂತರ ರೂ. ಹಣಗಳಿಸುತ್ತಿದ್ದಾರೆ. ಅಲ್ಲಿಯ ಜನ ಉತ್ತಮ ಕೌಶಲ ತರಬೇತಿ ಪಡೆದಿರುವುದೇ ಇದಕ್ಕೆ ಕಾರಣವಾಗಿದ್ದು, ನಾವು ಸ್ಥಳೀಯವಾಗಿ ಕೌಶಲವನ್ನು ವೃದ್ಧಿಸಿಕೊಳ್ಳಬೇಕು. ಜೀವನ ಮಟ್ಟದ ಸುಧಾರಣೆಯ ಜತೆಗೆ ವೃತ್ತಿಗೆ ಹೆಚ್ಚಿನ ಆಸಕ್ತಿ ವಹಿಸಬೇಕು. ಅದಕ್ಕಾಗಿ ಪರಿಶ್ರಮಿಸಬೇಕು. ವಿದೇಶಿ ವ್ಯಾಮೋಹ, ವಿದೇಶಿ ವಸ್ತುಗಳ ಬದಲಿಗೆ ದೇಶೀಯ ವಸ್ತುಗಳಿಗೆ ಮನ್ನಣೆ ನೀಡಬೇಕು. ಗಾಂಧೀಜಿ ಅವರ ಕಲ್ಪನೆಯಂತೆ ಸ್ವದೇಶಿ ಹಾದಿಯಲ್ಲಿ ಸಾಗಬೇಕು. ಆ ನಿಟ್ಟಿನಲ್ಲಿ ಸ್ಥಳೀಯ ಉತ್ಪನ್ನಗಳಿಗೆ ಸ್ಥಳೀಯವಾಗಿಯೇ ಮಾರುಕಟ್ಟೆ ಸೌಲಭ್ಯ ಕಲ್ಪಿಸಲು ನಾನೂ ಶ್ರಮಿಸುವೆ ಎಂದು ಸಂಸದ ಸುಧಾಕರ್ ಭರವಸೆ ನೀಡಿದರು.
ತಹಸೀಲ್ದಾರ್ ಮಹೇಶ್ ಎಸ್.ಪತ್ರಿ ಮಾತನಾಡಿ, ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ 18 ವರ್ಗದ ಕುಶಲ ಕರ್ಮಿಗಳಿಗೆ ಕೌಶಲ ಅಭಿವೃದ್ಧಿ ತರಬೇತಿ, ತಾಂತ್ರಿಕ ಜ್ಞಾನ, ಹೊಸ ಉಪಕರಣ ಹಾಗೂ ಖಾತರಿ ರಹಿತ ಬ್ಯಾಂಕ್ ಸಾಲ ಸೌಲಭ್ಯ ಕಲ್ಪಿಸಿಕೊಡಲಾಗುತ್ತಿದೆ. ಕಾರ್ಮಿಕರು ತಯಾರಿಸುವ ಉತ್ಪನ್ನಗಳಿಗೆ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಮಾರುಕಟ್ಟೆಯಲ್ಲಿ ಸೌಲಭ್ಯ ಕಲ್ಪಿಸುವುದು ಯೋಜನೆಯ ಮೂಲ ಉದ್ದೇಶವಾಗಿದೆ ಎಂದರು.
ನಾರಾಯಣ ತರಬೇತಿ ಸಂಸ್ಥೆ ಅಧ್ಯಕ್ಷೆ ಸರಳಾ ಮಂಜುನಾಥ್ ಮಾತನಾಡಿ, ದೇಶದಲ್ಲಿ ನಿರುದ್ಯೋಗ ಪ್ರಮಾಣ ತಗ್ಗಿಸಿ ಸ್ವ-ಉದ್ಯೋಗಾವಕಾಶಗಳನ್ನು ಕಲ್ಪಿಸುವ ಸಲುವಾಗಿ ಕೇಂದ್ರ ಸರ್ಕಾರ ವಿಶ್ವಕರ್ಮ ಯೋಜನೆಯನ್ನು ಅನುಷ್ಠಾನಗೊಳಿಸಿದ್ದು, ನಿರುದ್ಯೋಗಿಗಳು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದರು. ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಿ.ಜಿ.ವೇಣುಗೋಪಾಲ ರೆಡ್ಡಿ, ನಗರಸಭಾ ಸದಸ್ಯ ಮಾರ್ಕೆಟ್ ಮೋಹನ್, ನಗರಸಭಾ ಮಾಜಿ ಸದಸ್ಯ ಕೆ.ಎಸ್.ಅನಂತರಾಜು, ಮಂಜುನಾಥ್, ಮುಖಂಡರಾದ ಆರ್.ಪಿ.ಗೋಪಾಲಗೌಡ ಇತರರು ಇದ್ದರು.