ಅಭಿವೃದ್ಧಿ ಮಾಡಿ ಕಂಡಿರುವ ಸೋಲನ್ನು ಸವಾಲಾಗಿ ಸ್ವೀಕರಿಸುವೆ: ಡಿ.ಕೆ. ಸುರೇಶ್

R R Nagar _ D K Suresh
Published on

ಬೆಂಗಳೂರು: ಒಕ್ಕಲಿಗನಿದ್ದೇನೆ, ಹಿಂದೂಧರ್ಮದಲ್ಲಿದ್ದೇನೆ ಮತ ಹಾಕಿ ಎಂದು ಕೇಳಲಿಲ್ಲ. ನನಗೆ ಕೂಲಿನೀಡಿ ಎಂದು ಮನವಿ ಮಾಡಿದರು ಪರಾಭವ ಗೊಂಡಿದ್ದೇನೆ. ಅಭಿವೃದ್ಧಿ ಮಾಡಿ ಕಂಡಿರುವ ಸೋಲನ್ನು ಸವಾಲಾಗಿ ಸ್ವೀಕರಿಸಿ ಮುಂದೆಯೂ ಬಡವರ ಹಾಗೂ ರೈತರ ಪರವಾಗಿ ಕೆಲಸ ಮಾಡುತ್ತೇನೆ ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.

ಬೆಂಗಳೂರು ಗ್ರಾಮಾಂತರ ಲೋಕಸಭಾದ ಕಾಂಗ್ರೆಸ್ ಮತದಾರರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.

ಜಾತಿ ಧರ್ಮ ಭಾವನೆಗಳಿಗೆ ಮತದಾರರು ಮತ ನೀಡಿದ್ದಾರೆ ಹೊರತು ಬಿಜೆಪಿಗೆ ಮತ ಹಾಕಿಲ್ಲ. ಸೋಲು ಗೆಲುವು ಸಮನಾಗಿ ಸ್ವೀಕರಿಸಿ ಕಾಂಗ್ರೆಸ್ ಕಾರ್ಯಕರ್ತರ ಬೆನ್ನಿಗೆ ನಿಂತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರ ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳಲ್ಲಿ ಪಕ್ಷವನ್ನು ಸದೃಢವಾಗಿ ಕೆಳಹಂತದಿಂದ ಸಂಘಟಿಸುತ್ತೇನೆ ಎಂದರು.

ಈ ಚುನಾವಣೆಯಲ್ಲಿ ಸೋತಿರಬಹುದು ನಾನು ಸತ್ತಿಲ್ಲ ನನ್ನ ಹೋರಾಟ ನಿರಂತರವಾಗಿರುತ್ತದೆ. ಜಾತಿ ಧರ್ಮ ಕೈಕೊಟ್ಟಿದೆ. ಮತದಾರರು ನನಗೆ ವಿಶ್ರಾಂತಿ ನೀಡಿದ್ದಾರೆ. ಇದನ್ನು ಗೌರವಯುತವಾಗಿ ಸ್ವೀಕರಿಸುತ್ತೇನೆ ಎಂದು ಹೇಳಿದರು.

ಕೆಪಿಸಿಸಿ ವಕ್ತಾರೆ ಹೆಚ್. ಕುಸುಮಾ ಮಾತನಾಡಿ, ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಿರಂತರವಾಗಿ ಜನರ ಸಮಸ್ಯೆಗೆ ಸ್ಪಂದಿಸಿ ಅಭಿವೃದ್ಧಿ ಮಾಡಿರುವುದನ್ನು ಜನತೆ ಪರಿಗಣಿಸದಿರುವುದು ಆಶ್ಚರ್ಯ ತಂದಿದೆ. ಅಭಿವೃದ್ಧಿ ಪರ ಚಿಂತಕ ಡಿ.ಕೆ. ಸುರೇಶ್ ಅವರನ್ನು ಕಡೆಗಣಿಸಿ ನಾಟಕೀಯ ರಾಜಕಾರಣಕ್ಕೆ ಜನತೆ ಆಶೀರ್ವಾದ ಮಾಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಬೆಂಗಳೂರು ಪಶ್ಚಿಮ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹನುಮಂತರಾಯಪ್ಪ, ವಿಧಾನಪರಿಷತ್ ಸದಸ್ಯ ರವಿ, ಪಾಲಿಕೆ ಮಾಜಿ ಸದಸ್ಯರಾದ ವೇಲುನಾಯಕರ್, ಮಂಜುಳಾ ನಾರಾಯಣಸ್ವಾಮಿ, ಜಿ. ಮೋಹನ್ ಕುಮಾರ್, ಬಿ.ಆರ್, ನಂಜುಂಡಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಂಪುರ ನಾಗೇಶ್, ಕೆಪಿಸಿಸಿ ಸದಸ್ಯ ಬೆಟ್ಟಸ್ವಾಮಿ ಗೌಡ, ಕಾಂಗ್ರೆಸ್ ಮುಖಂಡರಾದ ಶೇಖರ್, ಹೆಚ್. ತುಕಾರಾಂ, ರಾಜೇಶ್ ಗೂಳಿಗೌಡ, ಲಗ್ಗೆರೆ ರಮೇಶ್ ಗೌಡ ರಘು ಗೌಡ, ಕಾಂಗ್ರೆಸ್ ಕಾರ್ಯಕರ್ತರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net