ಅತ್ತು ಕರೆದು ಡ್ರಾಮಾ ಮಾಡಿ ಅಭ್ಯಾಸ ನನಗೆ ಇಲ್ಲ ಎಂದ ಪರಮೇಶ್ವರ

Param_Web
Published on


ತುಮಕೂರು: ನನಗೆ ಡ್ರಾಮಾ ಮಾಡೋ ಅಗತ್ಯ ಇಲ್ಲ. ಅತ್ತು ಕರೆದು ಡ್ರಾಮಾ ಮಾಡಿ ಅಭ್ಯಾಸವು ಇಲ್ಲ. ಜನರ ಮುಂದೆ ಹೋಗ್ತೀನಿ ಅವರು ಏನು ತೀರ್ಪು ಕೊಡುತ್ತಾರೋ ಅದನ್ನು ಸ್ವೀಕರಿಸುತ್ತೇನೆ ಎಂದು ಕಾಂಗ್ರೆಸ್ ಶಾಸಕ, ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಹೇಳಿದರು.


ಚುನಾವಣಾ ಪ್ರಚಾರ ವೇಳೆ ಕಲ್ಲೇಟು ಬಿದ್ದು ತಲೆಗೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ತುಮಕೂರಿನ ಹೊರವಲಯದ ಸಿದ್ದಾರ್ಥ ನಗರದ ನಿವಾಸದಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಪರಮೇಶ್ವರ ಶನಿವಾರ ಸಂಜೆ ಸುದ್ದಿಗೋಷ್ಠಿ ಕರೆದು ತಮ್ಮ ಆರೋಗ್ಯ ಪರಿಸ್ಥಿತಿ ಕುರಿತು ವಿವರಣೆ ನೀಡಿದರಲ್ಲದೆ, ಯಾರೂ ಸಹ ಉದ್ವೇಗಕ್ಕೆ ಒಳಗಾಗಬಾರದು. ಎಲ್ಲರ ವಿಷಯದಲ್ಲು ಪ್ರತಿಕ್ರಿಯೆ ಇದ್ದೆ ಇರುತ್ತೆ. ನನಗೆ ಭದ್ರತೆಯ ಅವಶ್ಯಕತೆ ಬೇಕು ಅಂದುಕೊಂಡಿರಲಿಲ್ಲ. ಯಾವುದೇ ತೊಂದರೆ ಆದರೂ ಎದರಿಸುತ್ತೀನಿ. ವೈದ್ಯರ ಸಲಹೆಯಂತೆ ಇನ್ನೊಂದು ದಿನ ವಿಶ್ರಾಂತಿ ಪಡೆದು ಮತ್ತೆ ಚುನಾವಣಾ ಪ್ರಚಾರಕ್ಕೆ ತೆರಳುವೆ ಎಂದು ಸ್ಪಷ್ಟಪಡಿಸಿದರು.


ಪರಮೇಶ್ವರ್ ಡ್ರಾಮಾ ಮಾಡುತ್ತಿದ್ದಾರೆಂಬ ಎಚ್ಡಿಕೆ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, ಏಟು ತಿಂದವನು ನಾನು. ಅವರಿಗೆ ಹೇಗೆ ಗೊತ್ತಾಗುತ್ತೆ ನನ್ನ ನೋವು. ಅವರಂತೆ ಅತ್ತು ಕರೆದು ಡ್ರಾಮಾ ಮಾಡಿ ಅಭ್ಯಾಸ ನನಗಿಲ್ಲ. ಅದರ ಅವಶ್ಯಕತೆಯು ಇಲ್ಲ. ಜನರ ಮುಂದೆ ಹೋಗ್ತೀನಿ. ನಾಲ್ಕು ಸಲ ಗೆದ್ದಿದ್ದೇನೆ, ಎರಡು ಬಾರಿ ಸೋತಿದ್ದೇನೆ. ನಾನು ಕ್ರೀಡಾಪಟು ಸೋಲು-ಗೆಲುವು ಒಂದೇ ನನಗೆ ಎಂದರು.


ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲ ನನ್ನ ಸ್ನೇಹಿತರು ಕರೆ ಮಾಡಿ ನನ್ನ ಆರೋಗ್ಯ ವಿಚಾರಿಸಿ ಧೈರ್ಯ ಹೇಳಿದ್ದಾರೆ. ಈ ಹಿಂದೆ 1999 ರಲ್ಲಿ ಇಂತಹ ಘಟನೆ ಒಂದು ನಡೆದಿತ್ತು. ಚಾಕುವಿನಲ್ಲಿ ಹಲ್ಲೆ ಮಾಡಲಾಗಿತ್ತು. ನನ್ನ ರಾಜಕೀಯ ಜೀವನದಲ್ಲಿ ನನಗೆ ಶತ್ರುಗಳು ಕಡಿಮೆ ಅಂದುಕೊಂಡಿದ್ದೇನೆ. ಒಂದು ವೇಳೆ ದ್ವೇಷ ಇದ್ರೆ ಈ ರೀತಿ ತೀರಿಸಿಕೊಳ್ಳಬಾರದು. ನಾನು ಪೊಲೀಸರಿಗೆ ತಿಳಿಸಿದ್ದೇನೆ ಕೂಡಲೇ ತನಿಖೆ ಮಾಡಿ ಕಂಡು ಹಿಡಿಯಿರಿ ಅಂತಾ ಹೇಳಿದ್ದು ಕೊರಟಗೆರೆಯಲ್ಲಿ ಶಾಂತಿಯುತ ಚುನಾವಣೆ ನಡೆಯಬೇಕೆಂಬುದು ನನ್ನ ಬಯಕೆ ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net