ಬಿಜೆಪಿ ಸರ್ಕಾರ ಸರ್ವಾಧಿಕಾರಿ ಧೋರಣೆ

bkt-12-2
ಬಾಗಲಕೋಟೆ ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿರುವ ಮಹಾತ್ಮ ಗಾಂಧೀಜಿ ಪುತ್ಥಳಿ ಎದುರು ಕಾಂಗ್ರೆಸ್ ನಾಯಕರು ಬುಧವಾರ ಮೌನ ಪ್ರತಿಭಟನೆ ನಡೆಸಿದರು.
Published on

ಬಾಗಲಕೋಟೆ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಽ ಅವರ ಸಂಸತ್ ಸದಸ್ಯತ್ವ ರದ್ದು ಪಡಿಸಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಎಂದು ನವನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿರುವ ಮಹಾತ್ಮಗಾಂಧಿ ಪ್ರತಿಮೆ ಎದುರು ಬುಧವಾರ ಕಾಂಗ್ರೆಸ್ ಜಿಲ್ಲಾ ಘಟಕದ ನೇತೃತ್ವದಲ್ಲಿ ಕಾರ್ಯಕರ್ತರು, ಮುಖಂಡರು ಮೌನ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ಭಾರತ್ ಜೋಡೊ ಯಾತ್ರೆ ನಂತರ ರಾಹುಲ್ ಗಾಂಧಿ ಅವರ ಜನಪ್ರಿಯತೆಯಿಂದ ಹೆದರಿರುವ ಕೇಂದ್ರದ ಬಿಜೆಪಿ ಸರ್ಕಾರ, ಅವರ ಸಂಸತ್ ಸದಸ್ಯತ್ವ ರದ್ದು ಮಾಡುವ ಮೂಲಕ ಪ್ರಜಾಪ್ರಭುತ್ವಕ್ಕೆ ಧಕ್ಕೆ ತರುತ್ತಿದೆ. ಇಂತಹ ಕ್ಷುಲ್ಲಕ ರಾಜಕಾರಣ, ವಿರೋಧ ಪಕ್ಷಗಳ ಬಗ್ಗೆ ಅಗೌರವ ಕಾಣುವ ಪ್ರವೃತಿ ಸಂವಿಧಾನ ಆಶಗಳಿಗೆ ಗಾಳಿಗೆ ತೋರುವ ಹುನ್ನಾರ ದೂರಿದರು.

ಪ್ರತಿಭಟನೆ ಆರಂಭಕ್ಕೂ ಮುನ್ನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮಾಡುತ್ತಿರುವ ಷಡ್ಯಂತ್ರ ಜನ ಗಮನಿಸುತ್ತಿದ್ದಾರೆ. ನಾವು ನ್ಯಾಯಾಲಯದ ತೀರ್ಪು ಗೌರವಿಸುತ್ತೇವೆ. ಆ ತೀರ್ಪು ನೀಡಿದ ನ್ಯಾಯಾಲಯವೇ ಮೇಲ್ಮನವಿಗೆ ಅವಕಾಶ ನೀಡಿದ್ದರೂ, ತೀರ್ಪು ಪ್ರಕಟಗೊಂಡ ಮರುದಿನವೇ ಸದಸ್ಯತ್ವ ರದ್ದುಗೊಳಿಸುವ ಮೂಲಕ ಕೇಂದ್ರ ಸರ್ಕಾರ ದ್ವೇಷ ರಾಜಕಾರಣ ಮಾಡುತ್ತಿದೆ ಎಂದು ಟೀಕಿಸಿದರು.

ಮಾಜಿ ಸಚಿವ ಎಸ್.ಆರ್.ಪಾಟೀಲ ಮಾತನಾಡಿ, ಬಿಜೆಪಿ ಸರ್ಕಾರ ಸರ್ವಾಽಕಾರಿ ಧೋರಣೆ ಅನುಸರಿಸುತ್ತಿದೆ. ವಿರೋಧ ಪಕ್ಷಗಳು ಇಲ್ಲದೆ ಆಡಳಿತ ನಡೆಸುವ ಬಯಕೆ ಅವರದ್ದು, ಇದು ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಕಾಂಗ್ರೆಸ್ ನಿರ್ನಾಮ ಮಾಡುತ್ತೇವೆ ಎನ್ನುತ್ತಾರೆ. ಇದು ಎಂದಿಗೂ ಸಾಧ್ಯವಿಲ್ಲ. ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವೂ ಇರಬೇಕು ಎನ್ನುವ ಅರಿವು ಅವರಿಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಹುಲ ಗಾಂಧಿ ಅವರ ಸಂಸತ್ ಸದಸ್ಯತ್ವ ಅನರ್ಹಗೊಳಿಸಿರುವುದು ನಾಚಿಕೆಗೇಡಿನ ಸಂಗತಿ. ಅಂಬಾನಿ, ಅದಾನಿ ಬಗ್ಗೆ ಮಾತನಾಡಿದರೇ ಇವರಿಗೆ ನೋವು ಆಗುತ್ತದೆ. ಬಡವರ ಪರ ಪ್ರಶ್ನೆ ಎತ್ತಿದ್ದರೇ ದೇಶ ವಿರೋಧಿ ಪಟ್ಟ ಕಟ್ಟುತ್ತಾರೆ. ಬಿಜೆಪಿ ಅಽಕಾರದ ಅಮಲಿನಲ್ಲಿದೆ. ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿ ಹಿಡಿಯಲು ಕಾಂಗ್ರೆಸ್ ಹೋರಾಟ ಮುಂದುವರಿಸಲಿದೆ ಎಂದರು.

ಮಾಜಿ ಸಚಿವ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಬಸವೇಶ್ವರ ಬ್ಯಾಂಕ್ ಅಧ್ಯಕ್ಷ ಪ್ರಕಾಶ ತಪಶೆಟ್ಟಿ, ನಾಗರಾಜ ಹದ್ಲಿ, ರಾಜು ಮನ್ನಿಕೇರಿ, ವೀಣಾ ಕಾಶಪ್ಪನವರ, ಬಾಯಕ್ಕ ಮೇಟಿ, ರಕ್ಷಿತಾ ಈಟಿ, ರೇಣುಕಾ ನ್ಯಾಮಗೌಡ, ರೇಣುಕಾ ಭಜಂತ್ರಿ ಸೇರಿದಂತೆ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net