ಶ್ರೀರಂಗ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದು ಕಾಂಗ್ರೆಸ್

51b30f1f-ca1b-47e4-acad-4294f408630b.jpg
Published on

ಮಾಗಡಿ: ಶ್ರೀರಂಗ ಕುಡಿಯುವ ನೀರಿನ ಯೋಜನೆ ನೀಡಿದ್ದು ಕಾಂಗ್ರೆಸ್ ಸರ್ಕಾರ. ಈಗ ಸತ್ತೇಗಾಲದಿಂದ ಕ್ಷೇತ್ರದ 44 ಕೆರೆಗಳಿಗೆ ಕಾವೇರಿ ನೀರು ತುಂಬಿಸುವ ಯೋಜನೆ, 159 ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಣೆ, ಮಂಚನಬೆಲೆ ಅಣೆಕಟ್ಟು ಕೆಳಭಾಗದ ಅಭಿವೃದ್ದಿಗೆ ರೂ.13 ಕೋಟಿ, ರೂ.35 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ಧಿ ಸೇರಿದಂತೆ ನೀರಾವರಿ ಇಲಾಖೆಯಿಂದ ಕ್ಷೇತ್ರದ ಅಭಿವೃದ್ದಿಗೆ ರೂ.100 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಮಾಗಡಿಯಲ್ಲಿ ಶುಕ್ರವಾರ ನಡೆದ ವಿವಿಧ ಇಲಾಖೆಗಳ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಸಮಾರಂಭದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿದರು.

“ಮಾಗಡಿ ಯೋಜನಾ ಪ್ರಾಧಿಕಾರದಿಂದ ಗೌರಮ್ಮ ಕೆರೆ ಅಭಿವೃದ್ಧಿಗೆ ರೂ.20 ಕೋಟಿ ನೀಡಲಾಗಿದೆ. ಇ ಸ್ವತ್ತನ್ನು 1200 ಜನರಿಗೆ ವಿತರಣೆ ಮಾಡಲಾಗಿದ್ದು ಮಿಕ್ಕವರಿಗೂ ಶೀಘ್ರದಲ್ಲೇ ವಿತರಣೆ ಮಾಡಲಾಗುವುದು. ಇಂತಹ ನೂರಾರು ಕೆಲಸಗಳನ್ನು ನಿಮಗಾಗಿ ನೀಡಿದ್ದೇವೆ. ಸುಮ್ಮನಹಳ್ಳಿಯಿಂದ ತಾವರೆಕೆರೆವರೆಗೆ ಮೆಟ್ರೋ ಮಾರ್ಗ ವಿಸ್ತರಣೆಯಾಗಲಿದೆ. ಇದರಿಂದ ನಿಮ್ಮ ಕ್ಷೇತ್ರಕ್ಕೆ ಹೆಚ್ಚು ಲಾಭವಾಗಲಿದೆ” ಎಂದು ತಿಳಿಸಿದರು. 

“ಆರೋಗ್ಯ ಕ್ಷೇತ್ರದಿಂದ ರೂ.40 ಕೋಟಿ ವೆಚ್ಚದ ಕಾಮಗಾರಿಗೆ ಆರೋಗ್ಯ ಸಚಿವರು ಮತ್ತು ನೂತನ ಬಸ್ ನಿಲ್ದಾಣ ಹಾಗೂ ಡಿಪೋ ಬಗ್ಗೆ ಸಾರಿಗೆ ಸಚಿವರು ವಾಗ್ದಾನ ನೀಡಿದ್ದಾರೆ. ನಾವು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ. ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ ಎನ್ನುವುದಕ್ಕೆ ಕ್ಷೇತ್ರದಲ್ಲಿ ಕೈಗೆತ್ತಿಕೊಂಡಿರುವ ಕೆಲಸಗಳೇ ಸಾಕ್ಷಿ” ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net