

ಹಾರೋಹಳ್ಳಿ : ಮೂಲ ಕಾಂಗ್ರೆಸ್ಸಿಗರ ಬಗ್ಗೆ ಮಾತನಾಡುವ ನೈತಿಕತೆ ವಲಸಿಗ ಕೈ ನಾಯಕರಿಗಿಲ್ಲ ಎಂದು ವಿಎಸ್‌ಎಸ್‌ಎನ್ ನಿರ್ದೇಶಕ ಎಚ್. ಸಿ. ಶೇಖರ್ ಗುಡುಗಿದರು.
ಪಟ್ಟಣದ ಹೊರವಲಯದ ಆನೇಕಲ್ ರಸ್ತೆಯ ನಿವಾಸದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 35 ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ದುಡಿಯುತ್ತಿದ್ದು, ಅಧಿಕಾರದ ಆಸೆಗಾಗಿ ಪಕ್ಷ ಬಿಟ್ಟು ಕಾಂಗ್ರೆಸ್‌ಗೆ ಬಂದಿರುವ ವಲಸಿಗರಿಂದ ನಾವು ಕಲಿಯಬೇಕಾಗಿಲ್ಲ ಎಂದರು.
40 ವರ್ಷಗಳಿಂದ ಮೂಲ ಕಾಂಗ್ರೆಸಿಗರು ಒಗ್ಗಟ್ಟಿನಿಂದ ಇದ್ದೇವೆ. ವಲಸಿಗರು ಕಾಂಗ್ರೆಸ್ ಮನೆ ಒಡೆಯಲು ಬಂದಿದ್ದಾರೆ ಎಂದು ಆರೋಪಿಸಿದ ಅವರು, ಆದರೂ ಮೂಲ ಕಾಂಗ್ರೆಸ್ಸಿಗರಿಗೆ ಅಧಿಕಾರ ನೀಡದೆ ವಲಸಿಗರಿಗೆ ನೀಡಿರುವುದು ಬೇಸರ ತಂದಿದೆ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಕೇಶವಮೂರ್ತಿ ಮಾತನಾಡಿದರು.
ಸಮತಾ ಸೈನಿಕ ದಳದ ಯುವ ಘಟಕದ ಅಧ್ಯಕ್ಷ ಜಿ.ಗೋವಿಂದಯ್ಯ ಮಾತನಾಡಿ, ಕೇವಲ ಚುನಾವಣಾ ಸಂದರ್ಭದಲ್ಲಿ ಮಾತ್ರ ಬಳಸಿಕೊಂಡು ಇನ್ನುಳಿದಂತೆ ಎಲ್ಲ ಅಧಿಕಾರಗಳಲ್ಲೂ ದಲಿತರಿಗೆ ಅಧಿಕಾರ ಸಿಗದಂತೆ ಮಾಡಲಾಗಿದೆ ಎಂದು ಹೇಳಿದರು.
ಕೆಡಿಪಿ ಸದಸ್ಯ ಕೋಟೆ ಕುಮಾರ್ ಮಾತನಾಡಿದರು. ಮುಖಂಡರಾದ ತಾಮಸಂದ್ರನಾಗೇಂದ್ರ, ಮಹೇಶ್, ಮುನಿಯಪ್ಪ ದಾಸ್, ಕೇಶವಮೂರ್ತಿ, ರಾಮಲಿಂಗಯ್ಯ, ಪ್ರಕಾಶ್, ಅಂಜನಮೂರ್ತಿ ಇತರರು ಇದ್ದರು.