

ಭೀಮಸಮುದ್ರ: ಕಾಂಗ್ರೆಸ್ ಘೋಷಿಸಿರುವ ಐದು ಗ್ಯಾರಂಟಿಗಳು ಜನರಿಗೆ ತಲುಪುವುದು ಅನುಮಾನ ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸದಸ್ಯ ಜಿ.ಎಸ್.ಅನಿತ್‌ಕುಮಾರ್ ಹೇಳಿದರು.
ಭೀಮಸಮುದ್ರದಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ಮೇರಾ ಬೂತ್ ಸಬ್ಸೇ ಮಜ್ಬೂತ್ ವೀಕ್ಷಣೆ ಬಳಿಕೆ ಮಾತನಾಡಿದರು.
ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಪ್ರಯಾಣ, ನಿರುದ್ಯೋಗಿಗಳಿಗೆ ಭತ್ಯೆ, ಗೃಹಲಕ್ಷ್ಮೀ, 200 ಯೂನಿಟ್ ವಿದ್ಯುತ್ ಹೀಗೆ ಅನೇಕ ಉಚಿತ ಸೌಲಭ್ಯಗಳನ್ನು ನೀಡುತ್ತೇವೆ ಎಂದು ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ಉಲ್ಟಾ ಹೊಡೆಯುತ್ತಿದೆ ಎಂದು ದೂರಿದರು.
ಯಾವುದೇ ಷರತ್ತು ವಿಧಿಸದೆ ಯೋಜನೆ ಜಾರಿಗೆ ಮುಂದಾಗಬೇಕು. ಆದರೆ, ಆರಂಭದಲ್ಲಿಯೇ ಕಾಂಗ್ರೆಸ್ ನುಡಿದಂತೆ ನಡೆದುಕೊಳ್ಳುವುದಿಲ್ಲ ಎಂಬ ಸುಳಿವು ನೀಡಿದೆ ಎಂದು ಹೇಳಿದರು.
ರಾಜ್ಯಸಭೆ ಸದಸ್ಯ ಕೆ.ಲಕ್ಷ್ಮಣ್ ಮಾತನಾಡಿ, ರಾಜ್ಯ ಸರ್ಕಾರ ಯಾವುದೇ ಭರವಸೆಗಳನ್ನು ಈಡೇರಿಸುವುದಿಲ್ಲ. ಗೊಂದಲ ಸೃಷ್ಟಿಸಿ ವಂಚಿಸಲಿದೆ ಎಂದು ದೂರಿದರು.
ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಆಗಿದ್ದರೂ ಚುನಾವಣೆ ಸಂದರ್ಭ ಹೇಳಿದ್ದ ಒಂದೂ ಭರವಸೆಯನ್ನು ಈಡೇರಿಸಿಲ್ಲ. ಅದೇ ರೀತಿ ರಾಜ್ಯದಲ್ಲೂ ಆಗಲಿದೆ ಎಂದು ಹೇಳಿದರು.
ಜಿಲ್ಲಾಧ್ಯಕ್ಷ ಎ.ಮುರಳಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಜಿ.ಎಸ್.ಕಲ್ಲೇಶಯ್ಯ, ಮುಖಂಡರಾದ ಅರುಣ್‌ಕುಮಾರ್, ಮಲ್ಲಿಕಾರ್ಜುನ್, ಗುರುಮೂತಿ, ಟಿ.ಜಿ.ಅಶೋಕ್, ಶಿವಕುಮಾರ್, ವೀರೇಶ್, ಸುದರ್ಶನ, ತಿಮ್ಮೇಶ್ ಇತರರಿದ್ದರು.