

ವಿಜಯವಾಣಿ ಸುದ್ದಿಜಾಲ ಹಳಿಯಾಳ
ಗುತ್ತಿಗೆ ಕಾಮಗಾರಿ, ಶಾಲೆ, ಮಠ ಮಂದಿರಗಳು, ಹುದ್ದೆಗಳ ವರ್ಗಾವಣೆ ಉದ್ಯೋಗಗಳನ್ನೂ ಬಿಜೆಪಿ ಸರ್ಕಾರ ಹಣ ಮಾಡಲು ಬಳಸಿಕೊಳ್ಳುತ್ತಿದೆ. ನಾವೆಲ್ಲರೂ ಒಟ್ಟಾಗಿ ನಿಂತುಕೊಳ್ಳದಿದ್ದಲ್ಲಿ ಬಿಜೆಪಿ ಇಡೀ ಕರ್ನಾಟಕವನ್ನೇ ಮಾರಾಟ ಮಾಡಲಿದೆ ಎಂದು ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದರು.
ಉತ್ತರಕನ್ನಡ ಜಿಲ್ಲೆ ಹಳಿಯಾಳ ಪಟ್ಟಣದ ಚಂದಾವನ ರೆಸಾರ್ಟನಲ್ಲಿ ನಡೆದ ಕಾಂಗ್ರೆಸ್ ಗ್ಯಾರೆಂಟಿ ಕಾರ್ಡ್ ವಿತರಣೆ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಜಿಲ್ಲಾ ಮಟ್ಟದ ಕಾರ್ಯಕಾರಿಣಿ ಸಭೆಗೆ ಚಾಲನೆ ನೀಡಿ ಮಾತನಾಡಿದರು. ನಾವೆಲ್ಲರೂ ಕರ್ನಾಟಕಕ್ಕಾಗಿ ಒಟ್ಟಾಗಿ ಕಾಂಗ್ರೆಸ್‌ನೊಂದಿಗೆ ನಿಂತುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.
ಬಿಜೆಪಿಯವರು ಜನರನ್ನು ಹಿಂಸೆಯ ಬೆಂಕಿಗೆ ನೂಕಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಾವು ಅಭಿವೃದ್ಧಿಯ ದಾರಿಯಲ್ಲಿ ಹೋಗಲಿಚ್ಛಿಸುತ್ತಿದ್ದು, ಕರಾವಳಿಯಿಂದಲೇ ನಮ್ಮ ಯೋಜನೆ ಪ್ರಾರಂಭಿಸುತ್ತೇವೆ. ದೇಶದಲ್ಲಿ ಎಲ್ಲಿ ಕೇಳಿದರೂ ಕರ್ನಾಟಕದಲ್ಲಿ 40 ಪರ್ಸೆಂಟ್ ಸರ್ಕಾರ ಇದೆ ಎನ್ನುತ್ತಾರೆ.ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಮಕ್ಕಳು ಕೂಡ "ಪೇ ಸಿಎಂ" ಎಂದು ಕರೆಯುತ್ತಾರೆ ಎಂದು ಲೇವಡಿ ಮಾಡಿದರು.
ಗುತ್ತಿಗೆದಾರರ ಸಂಘದವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು 40 ಪರ್ಸೆಂಟ್ ಕಮಿಷನ್ ಬಗ್ಗೆ ದೂರಿದ್ದರು. ಮೋದಿ ಅಷ್ಟು ಬಾರಿ ರಾಜ್ಯಕ್ಕೆ ಬಂದರೂ ಈ ಬಗ್ಗೆ ಮಾತನಾಡಿಲ್ಪಲ. ಬಿಜೆಪಿಯ ಕಾರ್ಯಕರ್ತನಾಗಿದ್ದ ಮೃತ ಸಂತೋಷ ಪಾಟೀಲರ ಮನೆಗೆ ಬಿಜೆಪಿ ತೆರಳಿಲ್ಲ. ರಾಜ್ಯಕ್ಕೆ ಬಂದ ಮೋದಿ ತುಂಬಾ ಟಾಟಾ ಮಾಡಿದ್ರು, ಸಂತೋಷ್ ಪಾಟೀಲರ ಮಡದಿಯ ಕಣ್ಣೀರು ಒರೆಸಿ, ಪರಿಹಾರ ನೀಡಿದ್ದರೆ ಚೆನ್ನಾಗಿರ್ತಿತ್ತು ಎಂದ ಅವರು ಕಾರ್ಯಕರ್ತರು, ಮುಖಂಡರನ್ನೇ ತಿನ್ನುವ ಬಿಜೆಪಿ ಇನ್ನು ರಾಜ್ಯವನ್ನು ಎಲ್ಲಿ ಬಿಡುತ್ತದೆ ಎಂದು ಪ್ರಶ್ನಿಸಿದರು. ಕಾಂಗ್ರೇಸ್ಸಿಗರು ಪ್ರತಿಯೊಬ್ಬರಿಂದ ತಲಾ 5 ರೂ. ಸಂಗ್ರಹಿಸಿ ಬೊಮ್ಮಾಯಿ ಅವರ ಹಣದ ದಾಹ ನೀಗಿಸುತ್ತೇವೆ. ಸಂತೋಷ್ ಮನೆಗೆ ಪರಿಹಾರ ಕೊಡ್ತೇವೆ. ನಿಮ್ಮ ಹಣದ ದಾಹ ತೀರಲು ಎಷ್ಟು ಹಣ ಬೇಕು ಎಂದು ಸವಾಲು ಹಾಕಿದರು.
ಮೈಸೂರು ಸ್ಯಾಂಡಲ್ ಸೋಪ್ ಸಂಸ್ಥೆಯನ್ನು ಕೂಡಾ ಬಿಜೆಪಿಯವರು ಭ್ರಷ್ಟಾಚಾರಕ್ಕೆ ನೂಕಿದರು. ಬಿಜೆಪಿಯ ಶಾಸಕರೊಬ್ಬರ ಮಗ ಭ್ರಷ್ಟಾಚಾರದಲ್ಲಿ ಸಿಲುಕಿದ್ದಾನೆ. ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಶಾಸಕರು ನಾಪತ್ತೆಯಾಗಿದ್ದು, ಲುಕೌಟ್ ನೋಟೀಸ್ ಜಾರಿ ಮಾಡಿದ್ದಾರೆ. ಬಿಜೆಪಿ ಶಾಸಕರನ್ನು ಹಿಡಿಯಲಾಗದ ಇವರಿಗೆ ಕ್ರಿಮಿನಲ್‌ಗಳನ್ನು ಹಿಡಿಯಲಾಗುತ್ತದೆಯೇ ? ಬೊಮ್ಮಾಯಿ, ಜ್ಞಾನೇಂದ್ರ ಅವರಿಗೆ ಲುಕ್ ಔಟ್ ನೋಟೀಸ್ ಜಾರಿ ಮಾಡಬೇಕು, ಅವರೇ ಶಾಸಕರನ್ನು ಬಚ್ಚಿಟ್ಟಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನ ಹಲವು ನಾಯಕರನ್ನು ಬುಲೆಟ್ ಹಾಗೂ ಬಾಂಬ್‌ಗಳಿಂದ ಸಾಯಿಸಲಾಗಿತ್ತು, ಕಾಂಗ್ರಸ್ ದೇಶಕ್ಕಾಗಿ ಸಾಕಷ್ಟು ತ್ಯಾಗ ಮಾಡಿದೆ. ಇಂದಿಗೂ ಜೀವಂತವಾಗಿದೆ. ಬೊಮ್ಮಾಯಿ, ಅಶ್ವತ್ಥ ನಾರಾಯಣ, ನಳಿನ್, ನಡ್ಡಾ ಅವರೇ ದಿನ ಹಾಗೂ ತಾರೀಕು ಹೇಳಿ ನಾವು ಸಿದ್ಧರಾಮಯ್ಯ, ಡಿ.ಕೆ.ಶಿವಕುಮಾರ್ ಅವರನ್ನು ಕರೆದುಕೊಂಡು ಬರುತ್ತೇವೆ. ನೀವು ಅವರನ್ನೂ ಸಾಯಿಸಿ. ಯಾರ್ಯಾರನ್ನೆಲ್ಲಾ ನೀವು ಸಾಯಿಸಬಹುದು..? ನಮ್ಮ ಪ್ರತಿಯೊಂದು ಮುಖಂಡರನ್ನು ನೀವು ಸಾಯಿಸಬಹುದು. ನಿಮ್ಮ ಬುಲೆಟ್ ಕಡಿಮೆಯಾಗುತ್ತದೆ ಹೊರತು ಅದಕ್ಕೊಡ್ಡುವ ನಮ್ಮ ಎದೆ ಕಡಿಮೆಯಾಗಲ್ಲ, ನೀವು ಎಲ್ಲರನ್ನು ಕೊಂದರೂ ಕಾಂಗ್ರೆಸ್‌ನ ಗ್ಯಾರಂಟಿಯನ್ನು ಮಾತ್ರ ನಿಲ್ಲಿಸಲಾಗಲ್ಲ
ಬಿಜೆಪಿಯವರು ಪ್ರತೀ ದಿನ ಜನರ ಜೇಬಿನಿಂದ ಹಣ ಕೀಳ್ತಾರೆ ಈ ಕಾರಣದಿಂದ ಕಾಂಗ್ರೆಸ್ ವಿವಿಧ ಗ್ಯಾರಂಟಿ ಯೋಜನೆಗಳನ್ನು ನೀಡುತ್ತಿದೆ ಎಂದರು.
2500ಕೋಟಿ ರೂ. ನೀಡಿದ್ರೆ ಸಿಎಂ ಪೋಸ್ಟ್ ದೊರೆಯುತ್ತೆ ಎಂದು ಬಿಜೆಪಿ ಶಾಸಕ ಬಸವರಾಜ ಯತ್ನಾಳ್ ಆರೋಪಿಸಿದ್ದರು. ಯತ್ನಾಳ್ ಸುಳ್ಳು ಹೇಳೋದಾದ್ರೆ ಅವರನ್ನು ಇನ್ನೂ ಪಕ್ಷದಿಂದ ಯಾಕೆ ತೆಗೆದಿಲ್ಲ ಎಂದು ಪ್ರಶ್ನೀಸಿದ ಸುರ್ಜೆವಾಲಾ ಕಾಂಗ್ರೆಸ್ ಘೋಷಿಸಿರುವ ಗ್ಯಾರೆಂಟಿ ಯೋಜನೆಗಳಿಗೆ ಹೆದರಿ ಬಿಜೆಪಿಯವರು ಕಾಂಗ್ರೆಸ್ ಮುಖಂಡರನ್ನು ಹತ್ಯೆಗೈಯ್ಯುವ ಮಾತನ್ನಾಡುತ್ತಿದ್ದಾರೆ. ಕಾಂಗ್ರೆಸ್ ಮುಖಂಡರನ್ನು ಹತ್ಯೆಗೈದರೂ ಕಾಂಗ್ರೆಸ್ ಕಾರ್ಯಕರ್ತರು ಜನರಿಗೆ ಗ್ಯಾರೆಂಟಿ ಯೋಜನೆಗಳನ್ನು ತಲುಪಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಶಾಸಕ ಆರ್.ವಿ.ದೇಶ್‌ಪಾಂಡೆ ಮಾತನಾಡಿ ದೇಶ ಹಾಗೂ ರಾಜ್ಯದಲ್ಲಿ ಒಂದೇ ಸರ್ಕಾರವಿದ್ರೂ ಅಶಾಂತಿ ನಿರ್ಮಾಣವಾಗಿದೆ. ಯಾವುದೇ ಪ್ರಗತಿ ದೇಶದಲ್ಲಿ ಕಂಡುಬರುತ್ತಿಲ್ಲ, ಬಡವರ ಸಂಖ್ಯೆ ಹೆಚ್ಚಾಗ್ತಿದೆ. ಇಂದು ಬೆಲೆಯೇರಿಕೆ ಗಗನಕ್ಕೇರಿದ್ದು, ಸರ್ಕಾರ ಬಡವರ ವಿರೋಧಿಯಾಗಿದೆ. 2 ಕೋಟಿ ನೂತನ ಉದ್ಯೋಗ ಸೃಷ್ಟಿ ಮಾಡ್ತೇನೆಂದು ಮೋದಿ ಹೇಳಿದ್ರು ಆದರೇ ಇಂದು ನಿರುದ್ಯೋಗ ತಾಂಡವವಾಡುತ್ತಿದೆ ಎಂದರು. ದೇಶದ ಶಾಂತಿ ಸೌಹಾರ್ದತೆಗೆ ಬಿಜೆಪಿ ಕಳಂಕ ತಂದಿದೆ. ಕಾಂಗ್ರೆಸ್ ಬಲಿಷ್ಠಗೊಳಿಸಲು ಮನೆ ಮನೆಗೆ ತೆರಳಿ ಕೆಲಸ ಮಾಡಬೇಕು. ಮುಂದಿನ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್ ಮಾತನಾಡಿದರು. ಚುನಾವಣಾ ಉಸ್ತುವಾರಿ ಮಯೂರ ಜಯಕುಮಾರ, ವೇದಿಕೆಯಲ್ಲಿ ಯೂಥ್ ಕಾಂಗ್ರೆಸ್ ಅಧ್ಯಕ್ಷ ಮಹ್ಮದ್ ನಲಪಾಡ್, ಮಾಜಿ ಶಾಸಕರಾದ ಮಂಕಾಳ ವೈದ್ಯ, ಶಾರದಾ ಶೆಟ್ಟಿ, ಸತೀಶ ಸೈಲ್, ಜೆಡಿ ನಾಯ್ಕ, ವಿ.ಎಸ್. ಪಾಟೀಲ ಮುಖಂಡ ನಿವೇದಿತ ಆಳ್ವಾ, ಜಿಲ್ಲಾಧ್ಯಕ್ಷ ಸಾಯಿ ನಾಥ ಗಾಂವಕರ ಮೊದಲಾದವರು ಇದ್ದರು.