ಕಾಂಗ್ರೆಸ್‌ನದ್ದು ಡೀಲ್ ಸರ್ಕಾರ : ಡಾ.ಬಿ.ಜಿ.ಪಾಟೀಲ್ ಕಿಡಿ

B.G.PATIL
Published on

ಅಧಿಕಾರಿಗಳ ವರ್ಗಾವಣೆಗೆ ಹಣ ಫಿಕ್ಸ್ / ಮುಡಾ ಸಿಎಂ ಸಂಕಷ್ಟ ತಪ್ಪಿದ್ದಲ್ಲ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ದಕ್ಷ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ, ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್‌ನದ್ದು `ಡೀಲ್' ಸರ್ಕಾರವಾಗಿದೆ. ಜನಪರ ಹಾಗೂ ಅಭಿವೃದ್ಧಿಪರ ಕೆಲಸಗಳು ಆಗುತ್ತಿಲ್ಲ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯರಾದ ಡಾ.ಬಿ.ಜಿ.ಪಾಟೀಲ್ ಆರೋಪಿಸಿದ್ದಾರೆ.
ಯಾದಗಿರಿಯ ಪಿಎಸ್‌ಐ ಪರಶುರಾಮರನ್ನು ವರ್ಗಾವಣೆ ಮಾಡಲು ಕಾಂಗ್ರೆಸ್ ಶಾಸಕರು ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಕೇಸ್ ದಾಖಲಾಗಿದೆ. ಇದೊಂದು ನಾಚಿಕೆಗೇಡು ಸಂಗತಿ. ಸರ್ಕಾರವು ದಕ್ಷ ಪೊಲೀಸ್ ಅಧಿಕಾರಿಗಳನ್ನು ಕೆಲಸ ಮಾಡಲು ಬಿಡುತ್ತಿಲ್ಲ. ವರ್ಗಾವಣೆ ಮಾಡಲು, ಹುದ್ದೆ ನೀಡಲು ತೈಲಿ ಬದಲಾಗುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪೊಲೀಸ್, ಕಂದಾಯ ಇನ್ನಿತರ ಪ್ರಮುಖ ಅಧಿಕಾರಿಗಳಿಗೆ ಮುಕ್ತವಾಗಿ ಕೆಲಸ ಮಾಡುವ ಅವಕಾಶವೇ ಇಲ್ಲದಂತಾಗಿದೆ. ಯಾದಗಿರಿ ಪಿಎಸ್‌ಐ ಸಾವು ಎಲ್ಲ ಪೊಲೀಸ್ ಅಧಿಕಾರಿಗಳನ್ನು ಮಾನಸಿಕವಾಗಿ ಕುಗ್ಗುವಂತೆ ಮಾಡಿದೆ. ಸರ್ಕಾರ ತನ್ನ ಮೇಲಿನ ಆರೋಪದಿಂದ ನುಣಚಿಕೊಳ್ಳಲು ಸಿಐಡಿ ತನಿಖೆಗೆ ವಹಿಸಿಕೊಟ್ಟಿದೆ. ಆದರೆ, ಇದರಿಂದ ಸತ್ಯಾಂಶ ಬಯಲಿಗೆ ಬರುವುದು ಕಷ್ಟ. ಹೀಗಾಗಿ ಸಿಬಿಐಗೆ ವಹಿಸಿಕೊಡಬೇಕು ಎಂದು ಶಾಸಕ ಪಾಟೀಲ್ ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಸರ್ಕಾರದಲ್ಲಿ ಒಂದರ ಮೇಲೊಂದರAತೆ ಹಗರಣಗಳು ಬಯಲಿಗೆ ಬರುತ್ತಿವೆ. ವಾಲ್ಮೀಕಿ ನಿಗಮ ಹಗರಣ, ಅದರ ಬಳಿಕ ಮುಡಾ ನಿವೇಶನ ಹಂಚಿಕೆ ಅಕ್ರಮ ಬಂದಿದೆ ಇದು ನೋಡಿದಾಗ ಕಾಂಗ್ರೆಸ್ ಹಗರಣಗಳ , ಡೀಲ್ ಕುದುರಿಸುವ, ಅಧಿಕಾರಿಗಳ ವರ್ಗಾವಣೆಗೆ ಹಣ ಫಿಕ್ಸ್ ಮಾಡುವ ಸರ್ಕಾರವಾಗಿದೆ ಎಂದು ಬಿ.ಜಿ.ಪಾಟೀಲ್ ಕಿಡಿಕಾರಿದ್ದಾರೆ.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ಸಂಕಷ್ಟಕ್ಕೆ ಸಿಲುಕು ಗ್ಯಾರಂಟಿ. ನಿಯಮ ಉಲ್ಲಂಘನೆ ಮಾಡಿ ನಿವೇಶನ ಪಡೆದುಕೊಳ್ಳಲಾಗಿದೆ. ಈ ಕುರಿತು ರಾಜ್ಯಪಾಲರು ಸಹ ನೋಟೀಸ್ ಜಾರಿಗೊಳಿಸಿದ್ದಾರೆ. ಆದರೆ, ಸಂಪುಟದ ಸದಸ್ಯರು ಸಿಎಂ ರಕ್ಷಣೆ ಮಾಡುವಂತ ನಿರ್ಧಾರ ಕೈಗೊಂಡಿದ್ದಾರೆ. ಆದರೆ, ಇದರಿಂದ ಸತ್ಯ ಮುಚ್ಚಿಡಲು ಸಾಧ್ಯವಾಗಲ್ಲ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net