

ಶಿರಾ: ರಾಜ್ಯ ಸರ್ಕಾರವು ಈಗ ಕೋಮ ಹಂತ ತಲುಪಿದ್ದು ಐಸಿಯುನಲ್ಲಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ಧಾಳಿ ನಡೆಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ರಾಜ್ಯ ಸುಭಿಕ್ಷ$ವಾಗಿಲ್ಲ. ಪ್ರತಿನಿತ್ಯ ಒಂದಲ್ಲ ಒಂದು ಅಪರಾಧ ಕೃತ್ಯಗಳು ನಡೆಯುತ್ತಿವೆ. ಗೃಹ ಇಲಾಖೆ ಇದೆಯೊ, ಇಲ್ಲವೊ ಎಂಬ ಅನುಮಾನ ಮೂಡುತ್ತಿದೆ ಎಂದರು.
ರಾಜ್ಯದಲ್ಲಿ ದಿನನಿತ್ಯ ಕೊಲೆ, ದರೋಡೆ, ಸುಲಿಗೆ ನಡೆಯುತ್ತಿವೆ. ಹಸುವಿನ ಕೆಚ್ಚಲು ಕೊಯ್ಯುವಂತಹ ಹೀನಕೃತ್ಯ, ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಹೀಗೇ ಪ್ರತಿದಿನ ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇವೆ. ಇಷ್ಟೆಲ್ಲಾ ಕ್ರಿಮಿನಲ್ ಚಟುವಟಿಕಗಳ ನಡೆಯುತ್ತಿದ್ದರು ಕಂಡು ಕಾಣದೆ ಕುಳಿತಿರುವ ಈ ಕಾಂಗ್ರೆಸ್ ಸರ್ಕಾರವು ರಾಜ್ಯ ಹಾಗೂ ಜನತೆಯನ್ನು ಏನು ಮಾಡಲು ಹೊರಟಿದೆ ಎಂದು ಹರಿಹಾಯ್ದರು.
ಬಸ್ ದರ, ಸ್ಟಾ$ಂಪ್ ಡ್ಯೂಟಿ ಹೆಚ್ಚಳ, ಹಾಲಿನ ದರ ಹೆಚ್ಚಳ, ಮೆಟ್ರೋ ದರ ಹೆಚ್ಚಳ. ಅಲ್ಲದೆ ಎಲ್ಲಾ ವಸ್ತುಗಳ ಮೇಲಿನ ತೆರಿಗೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಬೆಲೆ ಏರಿಕೆ ಬರೆ ಹಾಕಲಾಗುತ್ತಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಬಜೆಟ್ ಮಂಡಿಸುವ ವೇಳೆ 25,000 ಕೋಟಿ ರೂ., ಗಳ ಸಾಲತೆಗೆದುಕೊಳ್ಳುವ ಅವಕಾಶವಿದ್ದರೂ ಕೂಡ ರಾಜ್ಯದ ಜನತೆ ಮೇಲೆ ಸಾಲದ ಹೊರೆ ಹೊರೆಸಬಾರದೆಂದು ಸಾಲ ಮಾಡಿರಲಿಲ್ಲ. ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಸರ್ಕಾರ ದಿವಾಳಿ ಯಾಗಿದ್ದು, ಇನ್ನೇನು ಕೇರಳ ರಾಜ್ಯದ ರೀತಿ ಭಿಕ್ಷೆ ಬೇಡುವ ಅಂತ ತಲುಪಲಿದೆ. ಅವರದೇ ಪಕ್ಷದ ಶಾಸಕರುಗಳು ಅಭಿವೃದ್ಧಿಗೆ ಹಣವಿಲ್ಲ ಎಂದು ಬಹಿರಂಗವಾಗಿ ಹೇಳಿಕೆ ನೀಡುತ್ತಿರುವುದು ಇದಕ್ಕೆ ನಿದರ್ಶನ ಎಂದು ಟೀಕಾಪ್ರಹಾರ ನಡೆಸಿದರು.
60 ಪರ್ಸೆಂಟ್ ಕಮೀಷನ್ ಸರ್ಕಾರ: ರಾಜ್ಯದ ಎಲ್ಲೆಡೆ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈಗ 60% ಕಮೀಷನ್ ಸರ್ಕಾರ ಇದೆ. ಇನ್ನು ಕೆಲವೇ ತಿಂಗಳಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಪದವಿಯಿಂದ ಇಳಿಯಲಿದ್ದಾರೆ ಎಂದು ಅಶೋಕ್ ಭವಿಷ್ಯ ನುಡಿದರು.
ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯು ಚುನಾವಣೆ ಪ್ರಕ್ರಿಯೆಯಿಂದ ನಡೆಯುವುದರಿಂದ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ. ಗೌಡ, ಬಿಜೆಪಿ ತಾಲೂಕು ಅಧ್ಯಕ್ಷ ಗಿರಿಧರ್, ಗ್ರಾಮೀಣ ಅಧ್ಯಕ್ಷ ಚಿಕ್ಕಣ್ಣ, ಎಪಿಎಂಸಿ ಮಾಜಿ ಅಧ್ಯಕ್ಷ ಭೂತಪ್ಪನ ಗುಡಿ ಸೋಮಣ್ಣ, ಗ್ರಾಪಂ ಮಾಜಿ ಉಪಾಧ್ಯಕ್ಷ ಭೂತಪ್ಪನ ಗುಡಿ ಈರಣ್ಣ ಮತ್ತಿತರರು ಹಾಜರಿದ್ದರು.