

ಕೊಡಗು: ಕರೊನಾ ಸೋಂಕಿಗೆ ಬಲಿಯಾದ ಅಮ್ಮನ ನೆನಪನ್ನು ಹೊತ್ತಿದ್ದ ಮೊಬೈಲ್ನ್ನು ನನಗೆ ದಯವಿಟ್ಟು ವಾಪಾಸು ಸಿಗುವಂತೆ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಬರೆದಿದ್ದ ಬಾಲಕಿಗೆ, ಕೊಡಗು ಯುವ ಕಾಂಗ್ರೆಸ್ ಹೊಸ ಮೊಬೈಲ್ನ್ನು ಕೊಡಿಸಿದೆ. ಅಮ್ಮನ ನೆನಪನ್ನು ಹೊತ್ತಿದ್ದ ಮೊಬೈಲ್ ಬದಲಾಗಿ ಹೊಸ ಮೊಬೈಲ್ ಕೊಟ್ಟಿದ್ದಕ್ಕೆ ಇದೀಗ ನೆಟ್ಟಿಗರ ಕೆಂಗಣ್ಣಿಗೂ ಗುರಿಯಾಗಿದೆ.
ಕೊಡಗು ಜಿಲ್ಲೆ ಕುಶಾಲನಗರದ ನಿವಾಸಿ ಪುಟ್ಟ ಬಾಲಕಿ ಹೃತಿಕ್ಷಳಿಗೆ ಮತ್ತು ಅವಳ ತಂದೆ ತಾಯಿಗೆ ಇತ್ತೀಚೆಗೆ ಕರೊನಾ ಸೋಂಕು ದೃಢವಾಗಿತ್ತು. ಅವಳೂ ಮತ್ತು ದಿನಗೂಲಿ ನೌಕರರಾದ ತಂದೆ ಮನೆಯಲ್ಲೇ ಕ್ವಾರಂಟೈನ್ ಮಾಡಿಕೊಂಡು ಚಿಕಿತ್ಸೆ ಪಡೆದರೆ, ತಾಯಿಯನ್ನು ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಮೇ 16 ರಂದು ಚಿಕಿತ್ಸೆ ಫಲಿಸದೆ ಆಕೆಯ ತಾಯಿ ಮೃತಪಟ್ಟರು. ಆ ವೇಳೆ ತಾಯಿಯ ಜೊತೆಗಿದ್ದ ಮೊಬೈಲ್ ವಾಪಸ್ ಸಿಕ್ಕಿರಲಿಲ್ಲ. ಯಾರೋ ತೆಗೆದುಕೊಂಡಿದ್ದರು. ಈ ಕುರಿತಾಗಿ ಬಾಲಕಿ ಜಿಲ್ಲಾಧಿಕಾರಿಗಳು, ಶಾಸಕರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಒಂದು ಪತ್ರ ಬರೆದಿದ್ದಳು. “ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ನೆನಪುಗಳು ಆ ಮೊಬೈಲ್‌ನಲ್ಲಿರುತ್ತದೆ. ಆದ್ದರಿಂದ ಯಾರಾದರೂ ತೆಗೆದುಕೊಂಡಿದ್ರೆ ಅಥವಾ ಯಾರಿಗಾದ್ರೂ ಸಿಕ್ಕಿದ್ರೆ ದಯವಿಟ್ಟು ಈ ತಬ್ಬಲಿಗೆ ಅದನ್ನು ತಲುಪಿಸಿ” ಎಂದು ಮನವಿ ಮಾಡಿದ್ದಳು.
ಈ ವಿಚಾರ ಸುದ್ದಿಯಾಗಿ ಕೆಲವೇ ಗಂಟೆಗಳಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಘಟಕ ಬಾಲಕಿಗೆ ಹೊಸ ಫೋನ್ ಅನ್ನು ಕೊಡಿಸಿದೆ. ಆದರೆ ಬಾಲಕಿಗೆ ಅಮ್ಮನ ಹಳೆಯ ಮೊಬೈಲ್ನಲ್ಲಿ ನೆನಪಿದ್ದದ್ದು ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಅದರಲ್ಲೂ ಕರೊನಾ ಈ ಸಮಯದಲ್ಲಿ ಮಾಸ್ಕ್ ಹಾಕದೆಯೇ ಆರೇಳು ಜನರು ಒಟ್ಟಾಗಿ ಬಾಲಕಿಯನ್ನು ಭೇಟಿ ಮಾಡಿರುವುದರ ಬಗ್ಗೆಯೂ ಪ್ರಶ್ನೆಗಳು ಎದುರಾಗಿವೆ. ಇನ್ನು ಲಾಕ್ಡೌನ್ ಸಮಯದಲ್ಲಿ ಯಾವುದೇ ಅಂಗಡಿಗಳು ಓಪನ್ ಇಲ್ಲದಿದ್ದರೂ ಇವರಿಗೆ ಹೊಸ ಮೊಬೈಲ್ ಕೊಳ್ಳಲು ಸಾಧ್ಯವಾಗಿದ್ದು ಹೇಗೆ ಎನ್ನುವುದೂ ಅನೇಕರು ಪ್ರಶ್ನೆಯಾಗಿದೆ.