ಕಾಂಗ್ರೆಸ್ ಸುಳ್ಳು ಭರವಸೆಗಳಿಗೆ ಮರುಳಾಗದಿರಿ

23NGD3
Published on

ನಂಜನಗೂಡು: ಬಿಜೆಪಿ ಪಕ್ಷ ನಾಯಕ ಸಮುದಾಯದ ಪ್ರಗತಿಗೆ ನೆರವಾಗುವಂತಹ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ವಾಲ್ಮೀಕಿ ಜಯಂತಿ ಆಚರಣೆ, ಮೀಸಲಾತಿ ಪ್ರಮಾಣ ಹೆಚ್ಚಿಸಿ ನಾಯಕ ಸಮುದಾಯಕ್ಕೆ ಹೆಚ್ಚಿನ ರಾಜಕೀಯ ಶಕ್ತಿ ನೀಡಿದ್ದು ಈ ಬಾರಿಯ ಚುನಾವಣೆಯಲ್ಲಿ ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಿಜೆಪಿಗೆ ಮತ ನೀಡಬೇಕು ಎಂದು ಜಂಗಲ್ ಲಾಡ್ಜ್ ಆ್ಯಂಡ್ ರೆಸಾರ್ಟ್ ಮಾಜಿ ಅಧ್ಯಕ್ಷ ಅಪ್ಪಣ್ಣ ಹೇಳಿದರು.


ತಾಲೂಕಿನ ಸಿಂಧುವಳ್ಳಿ ಗ್ರಾಮದಲ್ಲಿ ಮಂಗಳವಾರ ಸಂತಾನ ಗಣಪತಿ ಕಲ್ಯಾಣ ಮಂಟಪದಲ್ಲಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಾಲರಾಜ್ ಪರ ಪ್ರಚಾರ ಹಾಗೂ ಎಸ್ಟಿ ಸಮಾವೇಶದಲ್ಲಿ ಮಾತನಾಡಿದರು. 10 ವರ್ಷ ಆಡಳಿತ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಆಡಳಿತದಲ್ಲಿ ಒಬ್ಬ ಮಂತ್ರಿಯ ಮೇಲೂ ಸಣ್ಣ ಭ್ರಷ್ಟಾಚಾರದ ಆರೋಪಗಳಿಲ್ಲ. ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದಾರೆ. ಹೀಗಾಗಿ ಕಾಂಗ್ರೆಸ್ ಸುಳ್ಳು ಭರವಸೆಗಳಿಗೆ ಮರುಳಾಗದೆ ಸರಳ ಹಾಗೂ ಸಜ್ಜನ ವ್ಯಕ್ತಿ ಬಾಲರಾಜ್ ಅವರಿಗೆ ಒಂದು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.


ಜಿಪಂ ಮಾಜಿ ಸದಸ್ಯ ಸಿ.ಚಿಕ್ಕರಂಗನಾಯಕ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಈ ಭಾಗದ ಪ್ರಮುಖ ಸಮಸ್ಯೆಯಾಗಿದ್ದ ತಳವಾರ, ಪರಿವಾರ ಸಮಸ್ಯೆಯನ್ನು ಬಗೆಹರಿಸಿದ್ದಲ್ಲದೆ ಶೇ.3 ರಷ್ಟಿದ್ದ ಮೀಸಲಾತಿಯನ್ನು ಶೇ 7ಕ್ಕೆ ಹೆಚ್ಚಳ ಮಾಡಿ ನಾಯಕ ಸಮುದಾಯಕ್ಕೆ ನೆರವು ನೀಡಿದೆ. ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಪ್ರಥಮ ಬಾರಿಗೆ ವಾಲ್ಮೀಕಿ ಜಯಂತ್ಯುತ್ಸವ ಆಚರಣೆಗೆ ಅವಕಾಶ ನೀಡುವ ಮೂಲಕ ಸಮಾಜ ಸಂಘಟನೆಗೊಳ್ಳಲು ಕಾರಣೀಭೂತವಾಗಿದ್ದಾರೆ. ಇನ್ನು ಕಾಂಗ್ರೆಸ್ ಪಕ್ಷದವರು ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬುದಾಗಿ ಸುಳ್ಳು ವದಂತಿ ಹರಡುತ್ತಿದ್ದಾರೆ. ಈಗಾಗಲೇ ಸಂಸದ ವಿ.ಶ್ರೀನಿವಾಸಪ್ರಸಾದ್ ಅವರು ಬದಲಾವಣೆ ಮಾಡಲು ಸಂವಿಧಾನ ಮಗ್ಗಿ ಪುಸ್ತಕವಲ್ಲ ಎಂದು ಹೇಳಿದ್ದಾರೆ ಎಂದರು.


ಚಾಮರಾಜನಗರ-ಮೈಸೂರು ಜಿಲ್ಲಾ ನಾಯಕ ಸಂಘದ ಉಪಾಧ್ಯಕ್ಷ ಕುಂಭ್ರಳ್ಳಿ ಸುಬ್ಬಣ್ಣ ಮಾತನಾಡಿ, ನಾಯಕ ಸಮುದಾಯದಲ್ಲಿ ಒಗ್ಗಟ್ಟಿನ ಕೊರೆತೆಯಿಂದ ಮತಗಳು ಹಂಚಿಕೆಯಾಗುತ್ತಿದೆ. ಇದರಿಂದ ಸಮಾಜ ಸೌಲಭ್ಯಗಳಿಂದ ವಂಚಿತವಾಗುತ್ತಿದೆ. ಆದ್ದರಿಂದ ಶೇ 70ರಿಂದ 80 ಸಮಾಜದ ಬಂಧುಗಳು ಬಿಜೆಪಿ ಬೆಂಬಲಿಸಬೇಕು ಎಂದು ಕೋರಿದರು.


ವಿಧಾನ ಪರಿಷತ್ ಮಾಜಿ ಸದಸ್ಯ ಸಿದ್ದರಾಜು, ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ಮುದ್ದುಕೃಷ್ಣ, ಕಾರ್ಯದರ್ಶಿ ಸಿದ್ದರಾಜು, ಮಾಜಿ ಮೇಯರ್ ಶಿವಕುಮಾರ್, ಜಿಪಂ ಮಾಜಿ ಅಧ್ಯಕ್ಷ ರಾಮಚಂದ್ರ, ನಾಗೇಂದ್ರ, ತಾಪಂ ಮಾಜಿ ಸದಸ್ಯರಾದ ಮಹದೇವನಾಯಕ, ಶಿವಣ್ಣ, ರವೀಂದ್ರ, ಪ್ರಶಾಂತ್, ಸೋಮೇಶ್, ಚಂದ್ರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net