

ಹಾವೇರಿ: ಪಕ್ಷದ ಆಂತರಿಕ ಒಪ್ಪಂದದಂತೆ ಎಸ್.ಕೆ. ಕರಿಯಣ್ಣನವರ ರಾಜೀನಾಮೆಯಿಂದ ತೆರವಾಗಿರುವ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಆಕಾಂಕ್ಷಿಗಳಲ್ಲಿ ಚಟುವಟಿಕೆಗಳು ಗರಿಗೆದರಿವೆ.
2018 ಸೆಪ್ಟಂಬರ್ 20ರಂದು ಎಸ್.ಕೆ. ಕರಿಯಣ್ಣನವರ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಂದಿನಿಂದ ಒಂದು ವರ್ಷದ ಅವಧಿಗೆ ಅಧ್ಯಕ್ಷರಾಗುವಂತೆ ಪಕ್ಷದ ವರಿಷ್ಠರು ಆಂತರಿಕ ಒಪ್ಪಂದ ಮಾಡಿದ್ದರು. 2019ರಲ್ಲಿ ಲೋಕಸಭೆ ಚುನಾವಣೆ ನಂತರ ಹಿರೇಕೆರೂರ ಶಾಸಕ ಬಿ.ಸಿ. ಪಾಟೀಲ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರಿಂದ ಉಪಚುನಾವಣೆಯವರೆಗೂ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಹೈಕಮಾಂಡ್ ಸೂಚಿಸಿತ್ತು. ಅದರಂತೆ ಕರಿಯಣ್ಣನವರ ಮುಂದುವರಿದಿದ್ದರು. ಅಲ್ಲದೆ, ಹಿರೇಕೆರೂರ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಇವರಿಗೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದು ಟಿಕೆಟ್ ಅನ್ನು ಬಿ.ಎಚ್. ಬನ್ನಿಕೋಡರಿಗೆ ಬಿಟ್ಟುಕೊಡುವಂತೆ ಮನವೊಲಿಸಲಾಗಿತ್ತು. ಆದರೆ, ಇನ್ನುಳಿದ ಕಾಂಗ್ರೆಸ್ ಪಕ್ಷದ ಜಿಪಂನ ಆಕಾಂಕ್ಷಿ ಸದಸ್ಯರು ಕರಿಯಣ್ಣನವರಿಂದ ಸೆಪ್ಟೆಂಬರ್ನಲ್ಲಿಯೇ ರಾಜೀನಾಮೆ ಕೊಡಿಸಲು ಪಟ್ಟು ಹಿಡಿದಿದ್ದರು. ಆ ಸಮಯದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಈ ವಿಚಾರವನ್ನು ಸಿದ್ದರಾಮಯ್ಯ ಬಳಿಗೆ ಕೊಂಡ್ಯೊಯ್ದಿದ್ದರು. ಸಿದ್ದರಾಮಯ್ಯ ಅವರು ಹಿರೇಕೆರೂರ ಉಪಚುನಾವಣೆಯ ನಂತರ ರಾಜೀನಾಮೆ ನೀಡುವಂತೆ ಕರಿಯಣ್ಣನವರಿಗೆ ಸೂಚಿಸಿ ಇನ್ನುಳಿದ ಸದಸ್ಯರನ್ನು ಸಮಾಧಾನಿಸಿ ಕಳಿಸಿದ್ದರು. ಸಿದ್ದರಾಮಯ್ಯ ಸಲಹೆಯಂತೆ ಕರಿಯಣ್ಣನವರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದೀಗ ಸ್ವೀಕೃತಿಯಾಗಿ ಚುನಾವಣೆಯೂ ಫೆ. 15ಕ್ಕೆ ಘೊಷಣೆಯಾಗಿದೆ.
ಜಿಪಂ ಅಧ್ಯಕ್ಷ ಸ್ಥಾನದ ಮೇಲೆ ಸದಸ್ಯರಾದ ಶಿಗ್ಗಾಂವಿ ತಾಲೂಕಿನ ಬಸವರಾಜ ದೇಸಾಯಿ, ರಾಣೆಬೆನ್ನೂರ ತಾಲೂಕಿನ ಏಕನಾಥ ಭಾನುವಳ್ಳಿ, ಹಾನಗಲ್ಲ ತಾಲೂಕಿನ ಟಾಕನಗೌಡ ಪಾಟೀಲ, ರಾಘವೇಂದ್ರ ತಹಸೀಲ್ದಾರ್ ಕಣ್ಣಿಟ್ಟಿದ್ದಾರೆ. ಇವರೆಲ್ಲರೂ ಈಗಲೇ ಪಕ್ಷದ ವರಿಷ್ಠರ ಮೂಲಕ ಇನ್ನುಳಿದ ಅವಧಿಗೆ ತಮ್ಮನ್ನೇ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವಂತೆ ಒತ್ತಡ ಆರಂಭಿಸಿದ್ದಾರೆ. ಹೈಕಮಾಂಡ್ ಮಾತ್ರ ಇದುವರೆಗೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬಂದಿಲ್ಲ. ಆದರೂ ಈ ನಾಲ್ವರು ಸದಸ್ಯರು ನಾನಾ ರೀತಿಯಲ್ಲಿ ಹೈಕಮಾಂಡ್ ಮೇಲೆ ಪ್ರಭಾವ ಬೀರುವ ಯತ್ನ ಆರಂಭಿಸಿದ್ದಾರೆ.
ಮುಂಚೂಣಿಯಲ್ಲಿ ದೇಸಾಯಿ: ಶಿಗ್ಗಾಂವಿ ತಾಲೂಕು ದುಂಡಸಿ ಜಿಪಂ ಸದಸ್ಯ ಬಸವರಾಜ ದೇಸಾಯಿ ಅವರು ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದಾರೆ. ಅಲ್ಪಸಂಖ್ಯಾತ ಜೈನ ಸಮುದಾಯಕ್ಕೆ ಸೇರಿರುವ ದೇಸಾಯಿ ಅವರಿಗೆ ಸಾಮಾಜಿಕ ನ್ಯಾಯ ಪರಿಕಲ್ಪನೆಯಲ್ಲಿ ಅಧಿಕಾರ ಹಂಚಿಕೆ ಆಧಾರದ ಮೇಲೆ ಅಧ್ಯಕ್ಷ ಸ್ಥಾನ ನೀಡಲು ಜಿಲ್ಲೆಯ ಕೆಲ ಕಾಂಗ್ರೆಸ್ ಮುಖಂಡರು ಚಿಂತನೆ ನಡೆಸಿದ್ದಾರೆ. ಹಾವೇರಿ ಜಿಲ್ಲೆಯು ಈ ಮೊದಲು ಅವಿಭಜಿತ ಧಾರವಾಡ ಜಿಲ್ಲೆಯಲ್ಲಿ ಇದ್ದಾಗಿನಿಂದಲೂ ಜೈನ ಸಮುದಾಯದವರಿಗೆ ಯಾವುದೇ ಸ್ಥಾನಮಾನ ನೀಡಿಲ್ಲ. ಈ ಸಾರಿ ಅವಕಾಶವಿದೆ. ಅಲ್ಲದೆ, ದೇಸಾಯಿಯವರು ಶಿಗ್ಗಾಂವಿ-ಸವಣೂರ ಕ್ಷೇತ್ರದಲ್ಲಿ ಮಾಜಿ ಶಾಸಕ ಅಜೀಮ್ೕರ್ ಖಾದ್ರಿಯವರ ಆಪ್ತರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಕಿಸಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನು, ಹಾನಗಲ್ಲ ತಾಲೂಕಿನ ಟಾಕನಗೌಡ ಪಾಟೀಲ ಅವರು ಈ ಸಾರಿ ಅವಕಾಶ ನೀಡಬೇಕು ಎಂದು ಹೈಕಮಾಂಡ್ಗೆ ಒತ್ತಡ ಹಾಕಿದ್ದಾರೆ. ಆದರೆ, ಈಗಾಗಲೇ ಸಾದರ ಲಿಂಗಾಯತ ಸಮುದಾಯ ಕೊಟ್ರೇಶಪ್ಪ ಬಸೇಗಣ್ಣಿ ಮೊದಲ ಅವಧಿಯಲ್ಲಿ ಅಧ್ಯಕ್ಷರಾಗಿರುವುದರಿಂದ ಅವರಿಗೆ ಹೈಕಮಾಂಡ್ ಒಲವು ತೋರುವುದು ಸ್ವಲ್ಪ ಕಷ್ಟವಾಗಲಿದೆ. ರಾಣೆಬೆನ್ನೂರ ತಾಲೂಕಿನಿಂದ ಏಕನಾಥ ಬಾನುವಳ್ಳಿಯೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ, ಸದ್ಯ ಉಪಾಧ್ಯಕ್ಷ ಸ್ಥಾನವನ್ನು ರಾಣೆಬೆನ್ನೂರ ತಾಲೂಕಿನವರಿಗೆ ಕೊಟ್ಟಿರುವುದು ಬಾನುವಳ್ಳಿ ಅವರಿಗೆ ಹಿನ್ನೆಡೆಯಾಗುವ ಸಾಧ್ಯತೆಯಿದೆ. ಹಾನಗಲ್ಲ ತಾಲೂಕಿನ ಮಾಜಿ ಸಚಿವ ಮನೋಹರ ತಹಸೀಲ್ದಾರ್ ಅವರ ಪುತ್ರ ರಾಘವೇಂದ್ರ ತಹಸೀಲ್ದಾರ್, ಮಾಜಿ ಶಾಸಕ ಬಿ.ಎಚ್. ಬನ್ನಿಕೋಡರ ಪುತ್ರ ಪ್ರಕಾಶ ಬನ್ನಿಕೋಡ ಸಹ ತಮ್ಮದೇ ಆದ ಮಾರ್ಗದಲ್ಲಿ ಅಧ್ಯಕ್ಷ ಸ್ಥಾನಕ್ಕೆ ಹೈಕಮಾಂಡ್ ಮೇಲೆ ಒತ್ತಡ ಆರಂಭಿಸಿದ್ದಾರೆ. ಆದರೆ, ಹೈಕಮಾಂಡ್ ಮಾತ್ರ ಇನ್ನು ಯಾವುದೇ ಸ್ಪಷ್ಟ ನಿರ್ಧಾರ ಕೈಗೊಳ್ಳದೇ ಕೊನೆ ಕ್ಷಣದವರೆಗೆ ಕಾಯ್ದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ.
ತಂತ್ರಗಾರಿಕೆ ಕಷ್ಟ: ಜಿಪಂನಲ್ಲಿ ಒಟ್ಟು 34 ಸದಸ್ಯರ ಬಲವಿದೆ. ಕಾಂಗ್ರೆಸ್ನ 22 ಸದಸ್ಯರಿದ್ದರೆ, ಬಿಜೆಪಿಯ 12 ಸದಸ್ಯರಿದ್ದಾರೆ. ಹೀಗಾಗಿ, ಬಿಜೆಪಿಯು ಈ ಚುನಾವಣೆಯಲ್ಲಿ ಯಾವುದೇ ತಂತ್ರಗಾರಿಕೆ ನಡೆಸುವುದು ಕಷ್ಟ. ಬಿಜೆಪಿ ಪಾಳಯದಲ್ಲಿ ಚುನಾವಣೆ ಚಟುವಟಿಕೆಗಳು ಆರಂಭಗೊಂಡಿಲ್ಲ.
ಕಳೆದ ಹಲವಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿದ್ದೇನೆ. ಪಕ್ಷದಲ್ಲಿ ಜೈನ ಸಮುದಾಯಕ್ಕೆ ಯಾವುದೇ ಸ್ಥಾನ ಲಭಿಸಿಲ್ಲ. ಈ ಸಾರಿ ನನಗೆ ಅವಕಾಶ ಕಲ್ಪಿಸಿ ಸಾಮಾಜಿಕ ನ್ಯಾಯವನ್ನು ಪಕ್ಷದ ವರಿಷ್ಠರು ಎತ್ತಿ ಹಿಡಿಯವ ಭರವಸೆಯಿದೆ. ಸದಸ್ಯರು ನನಗೆ ಬೆಂಬಲ ಸೂಚಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. | ಬಸವರಾಜ ದೇಸಾಯಿ, ಜಿಪಂ ಸದಸ್ಯ, ದುಂಡಸಿ ಕ್ಷೇತ್ರ ಜಿಪಂ ಅಧ್ಯಕ್ಷ ಸ್ಥಾನಕ್ಕೆ ಬಸವರಾಜ ದೇಸಾಯಿ, ಟಾಕನಗೌಡ ಪಾಟೀಲ, ರಾಘವೇಂದ್ರ ತಹಸೀಲ್ದಾರ್, ಪ್ರಕಾಶ ಬನ್ನಿಕೋಡ ಆಕಾಂಕ್ಷಿಗಳಾಗಿದ್ದಾರೆ. ಇನ್ನೆರಡು ದಿನಗಳಲ್ಲಿ ಸದಸ್ಯರು ಹಾಗೂ ಪಕ್ಷದ ಮುಖಂಡರ ಸಭೆ ನಡೆಸಿ ಸದಸ್ಯರ ಅಭಿಪ್ರಾಯ ಸಂಗ್ರಹಿಸಿ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆಗೊಳಿಸುತ್ತೇವೆ. | ಎಂ.ಎಂ. ಹಿರೇಮಠ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು
ಪರಶುರಾಮ ಕೆರಿ