

ಚನ್ನಗಿರಿ: ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನೀಡಿದ ಭರವಸೆಯಂತೆ ಐದು ಗ್ಯಾರಂಟಿಗಳಲ್ಲಿ ನಾಲ್ಕು ಗ್ಯಾರಂಟಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಶಾಸಕ ಶಿವಗಂಗಾ ಬಸವರಾಜ್ ತಿಳಿಸಿದರು.
ಇಲ್ಲಿನ ತಾಲೂಕು ಕ್ರೀಡಾಂಣಗದಲ್ಲಿ ತಾಲೂಕು ಆಡಳಿತದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 77ನೇ ಸ್ವತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಂಗಳವಾರ ಮಾತನಾಡಿದರು.
ಸರ್ಕಾರ ಶಿಕ್ಷಣ, ಆರೋಗ್ಯ, ನೀರಾವರಿ ವಿದ್ಯುತ್ ಜತೆಗೆ ಬಡತನ ನಿವಾರಣೆ ಮುಂತಾದ ಸೇವೆ ಜನಸಾಮಾನ್ಯರಿಗೆ ತಲುಪಿಸುವಲ್ಲಿ ಕಾರ್ಯಪ್ರವೃತ್ತವಾಗಿದೆ. ಗೃಹಜ್ಯೋತಿ ಯೋಜನೆಯಡಿ ಕ್ಷೇತ್ರದಲ್ಲಿ 62717 ಸ್ಥಾವರಗಳಿಗೆ 1.49 ಕೋಟಿ ರೂ. ನೀಡಲಾಗಿದೆ.
ಅನ್ನಭಾಗ್ಯ ಯೋಜನೆಯಡಿ ಐದು ಕೆಜಿ ಪಡಿತರ ಬದಲಿಗೆ 36 ರೂ. ನಂತೆ 60496 ಪಡಿತರ ಚೀಟಿಗಳಿಗೆ 3.38 ಲಕ್ಷ ಡಿಪಿಟಿ ಮೂಲಕ ಖಾತೆಗೆ ಜಮಾ ಮಾಡಲಾಗಿದೆ ಎಂದರು.
ಗೃಹಲಕ್ಷ್ಮೀ ಯೋಜನೆಯಲ್ಲಿ ಮನೆ ಒಡತಿಗೆ ಮಾಸಿಕ ಗ್ರಾಮೀಣ ಮತ್ತು ನಗರ ಪ್ರದೇಶದ ಮಹಿಳೆಯರಿಂದ 68605 ಅರ್ಜಿ ಸ್ವೀಕರಿಸಲಾಗಿದೆ, ಅಮೃತಪುರ ಉಬ್ರಾಣಿ ಏತ ನೀರಾವರಿ ಯೋಜನೆಯ ಪಂಪ್‌ಗಳನ್ನು ದುರಸ್ತಿಗೊಳಿಸಿ ಚಾಲನೆ ನೀಡಿ ಕೆರೆ ತುಂಬಿಸುವ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ವಿವರಿಸಿದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಸೀಲ್ದಾರ್ ಪಿ.ಐ. ಯರ‌್ರಿಸ್ವಾಮಿ, ದೇಶದ ಸ್ವತಂತ್ರ್ಯಕ್ಕಾಗಿ ಹೋರಾಟ ಮಾಡಿ ಮಡಿದ ಮಹಾನಾಯಕರ ತ್ಯಾಗ ಬಲಿದಾನ ಸ್ಮರಿಸಬೇಕಿದೆ ಎಂದರು.
ಶಾಸಕ ಶಿವಗಂಗಾ ಬಸವರಾಜ್ ತೆರೆದ ವಾಹನದಲ್ಲಿ ಗೌರವ ರಕ್ಷೆ ಸ್ವೀಕಾರ ಪಡೆದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದಂತ ಸಾಧಕರು ಹಾಗೂ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಪದವಿಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಡಿವೈಎಸ್‌ಪಿ ಡಾ.ಸಂತೋಷ್, ತಾಪಂ ನಿರ್ವಾಹಣಾಧಿಕಾರಿ ಬಿ.ಕೆ. ಉತ್ತಮ್, ಬಿಇಒ ಎಲ್. ಜಯಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಶಿಧರ್ ಇನ್ನಿತರರು ಇದ್ದರು.