ಬಮೂಲ್​ ಚುನಾವಣೆಯಲ್ಲಿ ಕಾಂಗ್ರೆಸ್​ ಮೇಲುಗೈ: 10 ಸ್ಥಾನಗಳಲ್ಲಿ ಆಡಳಿತ ಪಕ್ಷದ ಅಭ್ಯರ್ಥಿಗಳು ಗೆಲುವು

bamulu
Published on

ಬೆಂಗಳೂರು: ಕಾರ್ಯಕರ್ತರ ನಡುವೆ ವಾಕ್ಸಮರ, ಪರಸ್ಪರ ದಿಕ್ಕಾರ ಮತ್ತು ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿ ಸೇರಿ ಹಲವು ರೋಚಕತೆಗಳಿಂದ ಕೂಡಿದ ಬೆಂಗಳೂರು ಸಹಕಾರಿ ಹಾಲು ಒಕ್ಕೂಟ(ಬಮೂಲ್​)ದ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ಮೇಲುಗೈ ಸಾಧಿಸಿದೆ.

ನಗರದ ಡೈರಿ ವೃತ್ತದಲ್ಲಿರುವ ಐಟಿಐ ಕಾಲೇಜಿನಲ್ಲಿ ಭಾನುವಾರ ನಡೆದ ಚುನಾವಣೆಯಲ್ಲಿ 14 ಸ್ಥಾನಗಳ ಪೈಕಿ 10 ಸ್ಥಾನಗಳಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಗೆಲುವು ಸಾಧಿಸಿದರೆ, 4 ಸ್ಥಾನಗಳಲ್ಲಿ ಬಿಜೆಪಿ-ಜೆಡಿಎಸ್​ ಅಭ್ಯರ್ಥಿಗಳು ಜಯಭೇರಿ ಬಾರಿಸಿದ್ದಾರೆ. ಬೆಂಗಳೂರು ನಗರ, ಗ್ರಾಮಾಂತರ, ಮತ್ತು ರಾಮನಗರ ಒಳಗೊಂಡಂತೆ ರಚನೆಯಾಗಿರುವ ಬಮೂಲ್​ನ 2025-2030ರ ಅವಧಿಯ ಆಡಳಿತ ಮಂಡಳಿಯ ಒಟ್ಟು 14 ನಿರ್ದೇಶಕರ ಪೈಕಿ ಕನಕಪುರ ಕ್ಷೇತ್ರದಿಂದ ಮಾಜಿ ಸಂಸದ ಡಿ.ಕೆ.ಸುರೇಶ್​, ಕುದೂರು ಕ್ಷೇತ್ರದಿಂದ ರಾಜಣ್ಣ ಮತ್ತು ಆನೇಕಲ್​ ಕ್ಷೇತ್ರದಿಂದ ಆರ್​.ಕೆ. ರಮೇಶ್​ ಅವಿರೋಧವಾಗಿ ಆಯ್ಕೆಯಾಗಿದ್ದರು. ಇನ್ನುಳಿದ 11 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳು ಮೇಲುಗೈ ಸಾಧಿಸಿದ್ದು, ಕರ್ನಾಟಕ ಹಾಲು ಮಹಾಮಂಡಳಿ(ಕೆಎಂಎಫ್​​​​) ಅಧ್ಯಕ್ಷರಾಗಿ ಡಿ.ಕೆ.ಸುರೇಶ್​ ಆಯ್ಕೆಯಾಗುವ ಸಾಧ್ಯತೆ ಇದೆ.

ಕಾಂಗ್ರೆಸ್​ ಸರ್ಕಾರವು ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸಿದೆ. ಈ ಬಗ್ಗೆ ಕಾನೂನು ಹೋರಾಟ ನಡೆಸುವುದಾಗಿ ಬಿಜೆಪಿ-ಜೆಡಿಎಸ್​ ಬೆಂಬಲಿತ ಅಭ್ಯರ್ಥಿ ಜಯಮುತ್ತು ಬೆಂಬಲಿಗರು ಹೇಳಿದ್ದಾರೆ. ಮತದಾನ ಎಣಿಕೆ ನಡೆಯುತ್ತಿದ್ದ ಸ್ಥಳಕ್ಕೆ ಡಿ.ಕೆ.ಸುರೇಶ್​ ಬಂದಿರುವ ಕುರಿತು ರಾಮನಗರದ ಬಿಜೆಪಿ-ಕಾಂಗ್ರೆಸ್​ ಕಾರ್ಯಕರ್ತರು ನಡುವೆ ಗಲಾಟೆ ನಡೆಯಿತು. ಸುರೇಶ್​ ಜೊತೆ ಬಂದಿರುವ ಮುಖಂಡರ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಯಿತು. ಈ ವೇಳೆ ಮೋದಿ ಪರವಾಗಿ ಬಿಜೆಪಿ ಕಾರ್ಯಕರ್ತರು ಘೋಷಣೆ ಕೂಗಿದ್ದರು.

ಅಭ್ಯರ್ಥಿಗಳ ಗೆಲುವು ವಿವರ:

* ಹೊಸಕೋಟೆ- ಸತೀಶ್​ಗೌಡ( ಕಾಂಗ್ರೆಸ್​)

* ಚನ್ನಪಟ್ಟಣ-ಲಿಂಗೇಶ್​ ಕುಮಾರ್​( ಕಾಂಗ್ರೆಸ್​)

* ನೆಲಮಂಗಲ-ಭವಾನಿ ಶಂಕರ್​ ಬೈರೇಗೌಡ( ಎನ್​ಡಿಎ)

*ಬೆಂಗಳೂರು ದಕ್ಷಿಣ- ಕೆ.ಎಂ.ಕೃಷ್ಣಯ್ಯ(ಕಾಂಗ್ರೆಸ್​)

* ದೇವನಹಳ್ಳಿ-ಎಸ್​.ಪಿ.ಮುನಿರಾಜು(ಕಾಂಗ್ರೆಸ್​)

* ಹಾರೋಹಳ್ಳಿ-ಹರೀಶ್​ ಕುಮಾರ್​(ಕಾಂಗ್ರೆಸ್​)

* ರಾಮನಗರ-ಪಿ.ನಾಗರಾಜು( ಕಾಂಗ್ರೆಸ್​)

*ಮಾಗಡಿ-ಎಚ್​.ಎನ್​.ಅಶೋಕ್​( ಕಾಂಗ್ರೆಸ್​)

* ದೊಡ್ಡಬಳ್ಳಾಪುರ-ಬಿ.ಸಿ.ಆನಂದ್​ (ಬಿಜೆಪಿ)

* ಬೆಂಗಳೂರು ಪೂರ್ವ-ಎಂ.ಮಂಜುನಾಥ್​( ಎನ್​ಡಿಎ)

* ಬೆಂಗಳೂರು ಉತ್ತರ -ಸತೀಶ್​ ಕೆ.ಆರ್​.ಕಡತನಮಲೆ( ಎನ್​ಡಿಎ)

* ಕನಕಪುರ-ಡಿ.ಕೆ.ಸುರೇಶ್​( ಕಾಂಗ್ರೆಸ್​)

* ಕುದೂರ-ರಾಜಣ್ಣ(ಕಾಂಗ್ರೆಸ್​)

* ಆನೇಕಲ್​-ಆರ್​.ಕೆ.ರಾಮೇಶ್​( ಕಾಂಗ್ರೆಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net