

ಯಳಂದೂರು: ಬಿಜೆಪಿ ಅಧಿಕಾರಕ್ಕೆ ಬಂದರೆ ಸಂವಿಧಾನ ಬದಲಾವಣೆ ಮಾಡುತ್ತದೆ ಎಂದು ಕಾಂಗ್ರೆಸ್‌ನವರು ಸುಳ್ಳು ಸೃಷ್ಟಿಸಿ ಪ್ರಚಾರ ಮಾಡುತ್ತಿದ್ದಾರೆ. ಆದರೆ, ಸಂವಿಧಾನದ ನಿಜವಾದ ವಿರೋಧಿ ಕಾಂಗ್ರೆಸ್ ಪಕ್ಷ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ಆರೋಪಿಸಿದರು.
ಪಟ್ಟಣದಲ್ಲಿ ಬುಧವಾರ ವಕೀಲರಲ್ಲಿ ಮತಯಾಚಿಸಿ ಮಾತನಾಡಿ, ಸಂವಿಧಾನವನ್ನು ಯಾರಿಂದಲೂ ಬದಲಾವಣೆ ಮಾಡಲು ಸಾಧ್ಯವಿಲ್ಲ. ಆದರೆ, ಆ ಸಂವಿಧಾನವನ್ನು ಕಾಂಗ್ರೆಸ್ ಪಕ್ಷವು ಹಲವು ಬಾರಿ ತಿದ್ದುಪಡಿ ಮಾಡಿದೆ. ಅಂಬೇಡ್ಕರ್ ಅವರು ಮೃತಪಟ್ಟಾಗ ಕಾಂಗ್ರೆಸ್ ಪಕ್ಷವು ಅಂತ್ಯ ಸಂಸ್ಕಾರಕ್ಕೆ ದೆಹಲಿಯಲ್ಲಿ ಸ್ಥಳ ನೀಡಲಿಲ್ಲ. ಎಸ್‌ಸಿ/ಎಸ್‌ಟಿ ವರ್ಗದ ಮೀಸಲು ಅನುದಾನವನ್ನು ಇತರ ಯೋಜನೆಗಳಿಗೆ ಬಳಕೆ ಮಾಡಿಕೊಂಡು ಖರ್ಚು ಮಾಡಲಾಗುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಜನ್ಮ ಭೂಮಿ, ದೀಕ್ಷಾಭೂಮಿ, ಚೈತ್ಯ ಭೂಮಿ, ಅವರು ವಿದ್ಯಾಭ್ಯಾಸ ಮಾಡಿದ ಸ್ಥಳವನ್ನು ಮ್ಯೂಸಿಯಂಗಳನ್ನಾಗಿ ಅಭಿವೃದ್ಧಿ ಮಾಡಿ ಅಂಬೇಡ್ಕರ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದ್ದಾರೆ. ಇದನ್ನು ಮೊದಲು ಕಾಂಗ್ರೆಸ್ ಮುಖಂಡರು ಮೊದಲು ಹೋಗಿ ನೋಡಿಕೊಂಡು ಬರಲಿ ಎಂದರು.
ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳು ಜನರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. 10 ಕೆಜಿ ಅಕ್ಕಿಯನ್ನು ನೀಡುತ್ತಿಲ್ಲ. ಪ್ರತಿ ಕುಟುಂಬಕ್ಕೆ 200 ಯೂನಿಟ್ ವಿದ್ಯುತ್ ಉಚಿತ ಎಂದು ಹೇಳಿ ಕಡಿಮೆ ಯೂನಿಟ್‌ಗೆ ನಿಲ್ಲಿಸಿ ಹೆಚ್ಚು ಹಣವನ್ನು ವಸೂಲು ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆ ಅರ್ಧದಷ್ಟು ಜನರಿಗೆ ತಲುಪುತ್ತಿಲ್ಲ. ಯುವನಿಧಿ ಯೋಜನೆ ಕೆಲವೇ ಯುವಕರಿಗೆ ಸಿಮೀತಗೊಂಡಿದೆ. ಪುರುಷರಿಗೆ ಯಾವುದೇ ಯೋಜನೆಗಳಲಿಲ್ಲ. ಹಾಗಾಗಿ, ಪುರುಷ ಮತದಾರರು ಬಿಜೆಪಿ ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದರು.
ಸಂಸದ ವಿ.ಶ್ರೀನಿವಾಸಪ್ರಸಾದ್ ಹಾಗೂ ಇಬ್ಬರು ಅಳಿಯಂದಿರಾದ ಹರ್ಷವರ್ಧನ್, ಡಾ.ಮೋಹನ್ ನನ್ನ ಜತೆಗೆ ಇದ್ದಾರೆ. ಬಡವರ್ಗದ ಸಾಮಾನ್ಯ ಕುಟುಂಬದಿಂದ ಬಂದಿರುವ ನಾನು ಜನರ ಸೇವೆ ಮಾಡಲು ಒಂದು ಅವಕಾಶ ಕಲ್ಪಿಸಿಕೊಡಿ ಎಂದರು.
ತಾಲೂಕು ಮಂಡಲದ ಅಧ್ಯಕ್ಷ ಅನಿಲ್, ಪ್ರಧಾನ ಕಾರ್ಯದರ್ಶಿ ಕೆಂಪರಾಜು, ಮುಖಂಡರಾದ ಕಂದಹಳ್ಳಿ ಮಹೇಶ್, ಮದ್ದೂರು ಸೋಮು, ವೈ.ಕೆ.ಮೋಳೆ ದೊರೆಸ್ವಾಮಿ, ನರೇಂದ್ರ, ಪ್ರಸಾದ್, ಹೊನ್ನೂರು ಸಿದ್ದರಾಜು, ಹೊಂಗನೂರು ಮಹದೇವಸ್ವಾಮಿ, ಮಾಂಬಳ್ಳಿ ಪರಶಿವಮೂರ್ತಿ, ರಂಗಸ್ವಾಮಿ, ಪಪಂ ಮಾಜಿ ಉಪಾಧ್ಯಕ್ಷ ಭೀಮಪ್ಪ, ಸೂರ್ಯನಾರಾಯಣ್, ವಕೀಲ ಕೆಸ್ತೂರು ಮಾದೇಶ್, ರಾಜಣ್ಣ, ಸಿದ್ದರಾಜು, ಕೃಷ್ಣ ಹಾಜರಿದ್ದರು.