

* ಅಧ್ಯಕ್ಷರಾಗಿ ರಮ್ಯಾ, ಉಪಾಧ್ಯಕ್ಷರಾಗಿ ರಿಯಾಜ್ ಅಹಮದ್ ಆಯ್ಕೆ
* ಜೆಡಿಎಸ್ಗೆ ಮುಖಭಂಗ
ಮಾಗಡಿ
ಪುರಸಭೆ ಅಧ್ಯಕ್ಷರಾಗಿ ಕಾಂಗ್ರೆಸ್ನ ರಮ್ಯಾ ನರಸಿಂಹಮೂರ್ತಿ, ಉಪಾದ್ಯಕ್ಷರಾಗಿ ರಿಯಾಜ್ ಅಹಮದ್ ಚುನಾಯಿತರಾಗಿದ್ದಾರೆ.
ಬುಧವಾರ ನಿಗದಿಯಾಗಿದ್ದ ಪುರಸಭೆಗೆ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ನಿಂದ ರಮ್ಯಾ ನರಸಿಂಹಮೂರ್ತಿ, ಉಪಾಧ್ಯಕ್ಷ ಸ್ಥಾನಕ್ಕೆ ರಿಯಾಜ್ ಅಹಮದ್ ಹಾಗೂ ಜೆಡಿಎಸ್ನಿಂದ ಅಧ್ಯಕ್ಷ ಸ್ಥಾನಕ್ಕೆ ನಾಗರತ್ನಮ್ಮ, ಉಪಾಧ್ಯಕ್ಷ ಸ್ಥಾನಕ್ಕೆ ಅಶ್ವತ್ಥ್ ನಾಮಪತ್ರ ಸಲ್ಲಿಸಿದರು. ಚುನಾವಣೆಯಲ್ಲಿ ರಮ್ಯಾ ಹಾಗೂ ರಿಯಾಜ್ ಆಹಮದ್ ಪರವಾಗಿ ಶಾಸಕ ಎಚ್.ಸಿ.ಬಾಲಕೃಷ್ಣ ಸೇರಿ 11 ಮಂದಿ ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿರು. ಚುನಾವಣಾಧಿಕಾರಿ ಶರತ್ ಕುಮಾರ್ ಫಲಿತಾಂಶ ಘೋಷಿಸಿದರು.
ಜೆಡಿಎಸ್ನ 12 ಮಂದಿ ಸದಸ್ಯರಿದ್ದರೂ 8 ಮಂದಿ ಕೈಎತ್ತುವ ಮೂಲಕ ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷರಿಗೆ ಬೆಂಬಲ ಸೂಚಿಸಿದರೆ, ವೆಂಕಟರಾಮು, ಕೆ.ಕೆ.ಕಾಂತರಾಜು, ಹೇಮಲತಾ ನಾಗರಾಜು, ರೆಹಮತ್ ತಟಸ್ಥರಾಗಿದ್ದರು. ಇದರಿಂದ ಜೆಡಿಎಸ್ಗೆ ಮುಖಭಂಗವಾಯಿತು. ಇದರ ನಡುವೆ ಬಿಜೆಪಿ ಏಕೈಕ ಸದಸ್ಯೆ ಭಾಗ್ಯಮ್ಮ ಚುನಾವಣೆಗೆ ಗೈರಾಗಿದ್ದರು.
ಕಾರಿನಲ್ಲಿ ಕರೆತಂದ ಶಾಸಕ:
ವೆಂಕಟರಾಮು, ಕೆ.ಕೆ.ಕಾಂತರಾಜು, ಹೇಮಲತಾ ನಾಗರಾಜು, ರೆಹಮತ್ ಅವರನ್ನು ಶಾಸಕ ಎಚ್.ಸಿ.ಬಾಲಕೃಷ್ಣ ಕಾರಿನಲ್ಲಿ ಮತ ಕೇಂದ್ರಕ್ಕೆ ಕರೆತಂದು ಚುನಾವಣೆ ವೇಳೆ ಕೈ ಎತ್ತದೆ ತಟಸ್ಥರಾಗುವಂತೆ ನೋಡಿಕೊಳ್ಳುವಲ್ಲಿ ಯಶಸ್ವಿಯಾದರು. ಅಂತೆಯೇ, ಚುನಾವಣೆ ಮುಗಿದ ನಂತರ 4 ಮಂದಿಯನ್ನೂ ಶಾಸಕರ ಕಾರಿನಲ್ಲೇ ಕಳುಹಿಸಿದ ಬಾಲಕೃಷ್ಣ ಬಳಿಕ ಅವರು ಬಿಎಂಆರ್ಡಿಎ ಮಾಜಿ ಅಧ್ಯಕ್ಷ ಕೆ.ಕೃಷ್ಣಮೂರ್ತಿ ಕಾರಿನಲ್ಲಿ ತೆರಳಿದರು.
ಜೆಡಿಎಸ್ ವಿಫಲ:
ಜೆಡಿಎಸ್ 12 ಸದಸ್ಯರು, ಒಬ್ಬ ಬಿಜೆಪಿ ಸದಸ್ಯೆ, ಸಂಸದರ ಮತ ಸೇರಿ 14 ಮತಗಳಿದ್ದವು. ಆದರೂ ಜೆಡಿಎಸ್ ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆಮಾಡಿಕೊಳ್ಳುವಲ್ಲಿ ವಿಫಲವಾಯಿತು.