ಹತ್ತುವರ್ಷಗಳಲ್ಲಿ ಯಾವುದೇ ಆಸ್ತಿ ಖರೀದಿಸದ ಎಸ್ಪಿಎಂ

SPM_Asset
Published on

ತುಮಕೂರು: ಹತ್ತುವರ್ಷಗಳ ಹಿಂದೆ 3 ಕೋಟಿಯಷ್ಟಿದ್ದ ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ.ಮುದ್ದಹನುಮೇಗೌಡರ ಒಟ್ಟು ಚರ-ಸ್ಥಿರಾಸ್ತಿ ಮೌಲ್ಯ ಈಗ 9.81 ಕೋಟಿಯಷ್ಟಾಗಿದೆ. ಈ 10 ವರ್ಷಗಳಲ್ಲಿ ಎಸ್ಪಿಎಂ ಯಾವುದೇ ಆಸ್ತಿಯನ್ನೂ ಖರೀದಿಸಿಲ್ಲ. ಸಾಲದ ಹೊರೆಯೂ ಇಲ್ಲ !

ತುಮಕೂರು ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಆಗಿ ಮುದ್ದಹನುಮೇಗೌಡ ಗುರುವಾರ ನಾಮಪತ್ರ ಸಲ್ಲಿಸಿದರು. ಇದರೊಟ್ಟಿಗೆ ತಮ್ಮ ಆಸ್ತಿ ವಿವರದ ಪ್ರಮಾಣ ಪತ್ರ ಸಲ್ಲಿಸಿದ್ದಾರೆ. ಬೆಂಗಳೂರಿನ ಗಂಗೇನಹಳ್ಳಿಯಲ್ಲಿ ಪ್ರಸ್ತುತ 4.60 ಕೋಟಿ ರೂ., ಬೆಲೆಬಾಳುವ 50 ಬೈ 80 ಚ.ಅಡಿ ನಿವೇಶನ, ಸಂಜಯನಗರದಲ್ಲಿ 3 ಕೋಟಿ ಮೌಲ್ಯದ ಪಿತ್ರಾರ್ಜಿತವಾಗಿ ಬಂದಿರುವ ಮನೆ ಇದೆ.

74,74,780 ರೂ. ವಾರ್ಷಿಕ ಆದಾಯ ತೋರಿಸಿರುವ ಎಸ್‌ಪಿಎಂ ಯಾರ ಬಳಿಯೂ ಸಾಲ ಮಾಡಿಲ್ಲ. ನವ ದೆಹಲಿಯ ಎಸ್‌ಬಿಐ ಶಾಖೆಯಲ್ಲಿ 8,52,357 ರೂ., ಹಾಗೂ ಬೆಂಗಳೂರಿನ ಸಂಜಯನಗರ ಎಸ್‌ಬಿಐ ಶಾಖೆಯಲ್ಲಿ 43,27,609 ರೂ., ಎಸ್ಪಿಎಂ ಹೊಂದಿದ್ದು ಅವರ ಹೆಸರಲ್ಲಿ 55,21,085 ರೂ., ಚರಾಸ್ತಿ ಇದೆ.

ಎಸ್‌ಪಿಎಂಗೆ ಚಿನ್ನದ ಮೇಲಿನ ವ್ಯಾಮೋಹವು ಇಲ್ಲ. ಅವರ ಹೆಸರಲ್ಲಿ ಕಾರು ಇಲ್ಲ. ಇನ್ನೂ ಪತ್ನಿ ಆರ್.ಕಲ್ಪಾನ ಬಳಿ 20 ಲಕ್ಷ ಮೌಲ್ಯದ 500 ಗ್ರಾಂ. ಚಿನ್ನಾಭರಣ ಇದೆ. 40 ಸಾವಿರ ಮೌಲ್ಯದ ಅರ್ಧ ಕೆಜಿ ಬೆಳ್ಳಿ ಬಿಟ್ಟರೆ ಬೇರೇನೂ ಇಲ್ಲ. ಮಗಳು ರಚನಾ ಹೆಸರಲ್ಲಿ ಬೆಂಗಳೂರಿನ ಎಸ್‌ಬಿಐ ಬ್ಯಾಂಕ್‌ನಲ್ಲಿ 42 ಲಕ್ಷ ರೂ., ಇದೆ. ಪತ್ನಿ, ಮಗಳಿಗೆ ಈ ಹತ್ತು ವರ್ಷದಲ್ಲಿ ಒಂದು ಗ್ರಾಂ ಚಿನ್ನ ಕೂಡ ಖರೀದಿಸಿಲ್ಲ.

ಹೆಬ್ಬೂರು ಹೋಬಳಿ ಕಲ್ಕೆರೆ, ರಾಮೇನಹಳ್ಳಿಯಲ್ಲಿ ಒಟ್ಟು 23 ಎಕರೆ 27 ಗುಂಟೆ ಕೃಷಿ ಭೂಮಿ ಇದೆ. ಇದರ ಅಂದಾಜು ಮಾರುಕಟ್ಟೆ ಬೆಲೆ 40 ಲಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net