

ಚನ್ನಪಟ್ಟಣ:
ಚುನಾವಣೆ ಹೊಸ್ತಿಲಿನಲ್ಲಿ ಚನ್ನಪಟ್ಟಣ ಟಿಎಪಿಸಿಎಂಎಸ್ ಸಂಸ್ಥೆಯ ಚುನಾವಣೆಯನ್ನು ಕಾಂಗ್ರೆಸ್ ಬಹಿಷ್ಕರಿಸಿದೆ.
ನಗರದ ಪ್ರತಿಷ್ಠಿತ ಟಿಎಪಿಸಿಎಂಎಸ್ ಸಂಸ್ಥೆಗೆ ಡಿ.೨೪ರ ಭಾನುವಾರ ಚುನಾವಣೆ ನಿಗಧಿಯಾಗಿತ್ತು. ಕಣದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬೆಂಬಲಿತರು ಇದ್ದರು.
ಕೆಲ ಕಾಂಗ್ರೆಸ್ ಅಭ್ಯರ್ಥಿಗಳು ಮನೆಮನೆಗೆ ತೆರಳಿ ಪ್ರಚಾರ ಸಹ ಕೈಗೊಂಡಿದ್ದರು. ಈ ಮಧ್ಯೆ
ಚುನಾವಣೆಯಿಂದ ಹೊರ ಉಳಿಯುವುದಾಗಿ ಶುಕ್ರವಾರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್ ಘೋಷಿಸಿದ್ದಾರೆ.
ಸಂಸ್ಥೆಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದ್ದ ಅಕ್ಕಿ ಹಗರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಸಾಕಷ್ಟು ಹೋರಾಟ ನಡೆಸಿತ್ತು. ಸಂಸ್ಥೆಗೆ ಈ ಹಿಂದೆ ಡಿ.೩ ರಂದು ನಿಗಧಿಯಾಗಿದ್ದ ಚುನಾವಣೆಯನ್ನು ಮುಂದೂಡಿಸುವಲ್ಲಿಯೂ ಸಹ ಕಾಂಗ್ರೆಸ್ ಯಶಸ್ವಿಗೊಂಡಿತ್ತು.
ಚುನಾವಣೆ ಮುಂದೂಡಿಕೆಯನ್ನು ಖಂಡಿಸಿ, ಜೆಡಿಎಸ್ ಹೋರಾಟವನ್ನು ಸಹ ನಡೆಸಿತ್ತು. ಈ ನಡುವೆ ಭಾನುವಾರ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಆಯ್ಕೆಗೆ ಚುನಾವಣೆ ನಿಗಧಿಯಾಗಿತ್ತು.
ಆದರೆ, ಚುನಾವಣೆಗೆ ಎರಡುದಿನ ಇರುವಾಗ, ನಗರದ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಚುನಾವಣೆಯಿಂದ ನಮ್ಮ ಪಕ್ಷ ಹೊರ ಉಳಿಯುವುದಾಗಿ ಘೋಷಿಸಿದರು.