

ಸಂವಿಧಾನದ ವಿಶೇಷ ಚರ್ಚೆ ಮುಂದುವರಿಸಿದ ಮೇಲ್ಮನೆ ಸದಸ್ಯರು, ತಮ್ಮ ಮಾತಿಗೆ ಪೂರಕವಾಗಿ ರಾಮಾಯಣ ಹಾಗೂ ಮಹಾಭಾರತದ ಪ್ರಸಂಗಗಳನ್ನು ಉಲ್ಲೇಖಿಸಿದರು. ಪರಸ್ಪರ ಟೀಕೆ ಹಾಗೂ ಕುಟುಕುವುದಕ್ಕೂ ಬಳಸಿಕೊಂಡರು. ರಾಮಾಯಣದಲ್ಲಿ ಸೀತೆ ಬಗ್ಗೆ ಬಟ್ಟೆ ತೊಳೆಯುವವ ಆಡಿದ ಮಾತನ್ನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ತೇಜಸ್ವಿನಿ ಗೌಡ ಹೋಲಿಸಿದರೆ, ಇದನ್ನು ಗೂಢಚಾರ ವ್ಯವಸ್ಥೆ ಬಲಿಷ್ಠವಾಗಿದ್ದುದಕ್ಕೆ ಜೆಡಿಎಸ್ನ ಭೋಜೇಗೌಡ ತುಲನೆ ಮಾಡಿದರು. ಕುರುಕ್ಷೇತ್ರದಲ್ಲಿ ಕರ್ಣನಿಗೆ ಬಾಣ ಬಿಡಲು ಹಿಂಜರಿದ ಅರ್ಜುನನಿಗೆ ಕೃಷ್ಣ ಬೋಧಿಸಿದ ರಾಜನೀತಿಯನ್ನು ಸಚಿವ ಸಿ.ಟಿ.ರವಿ ಪ್ರಸ್ತಾಪಿಸಿ, ಚುನಾವಣಾ ರಾಜಕೀಯದಲ್ಲಿ ಕಾಂಗ್ರೆಸ್ ಅನ್ನು ಉರುಳಿಸಿ ಬಿಜೆಪಿ ಮೇಲುಗೈ ಸಾಧಿಸಿದ ಬಗೆಗೆ ತುಲನೆ ಮಾಡಿದರು.
ಕೃಷ್ಣ ಏನೆಲ್ಲ ಮನವೊಲಿಸಲು ಪ್ರಯತ್ನಿಸಿದರೂ ದುರ್ಯೋಧನನಿಗೆ ಕರ್ಣನ ನಿಷ್ಠೆ ಅಚಲವಾಗಿತ್ತು. ಕರ್ಣನ ನಿಷ್ಠೆ ಇವತ್ತಿನ ರಾಜಕೀಯದಲ್ಲಿ ಎಲ್ಲಿದೆ ಎಂದು ಭೋಜೇಗೌಡ ಪ್ರಶ್ನಿಸಿ, ಈ ಮಾತಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡವೆಂದರು. ಈ ಮಧ್ಯೆ, ಲಕ್ಷ್ಮೀಶನ ಜೈಮಿನಿ ಭಾರತ, ಕುವೆಂಪು, ಜಿ.ಎಸ್.ಶಿವರುದ್ರಪ್ಪ ಕಾವ್ಯದ ತುಣುಕುಗಳನ್ನು ಭೋಜೇಗೌಡ ನಿರರ್ಗಳವಾಗಿ ವಾಚಿಸಿದಾಗ ಸದಸ್ಯರು ಮೇಜುಕುಟ್ಟಿ ಪ್ರೋತ್ಸಾಹಿಸಿದರು. ಸದಾ ವತ್ಸಲೇ ಮಾತೃಭೂಮೇ, ದೇಶಪ್ರೇಮ ಆರ್ಎಸ್ಎಸ್ಗೆ ಸೀಮಿತವಲ್ಲವೆಂದು ಭೋಜೇಗೌಡ ಹೇಳಿದಾಗ ಕಾಂಗ್ರೆಸ್ನ ಕೆಲವು ಸದಸ್ಯರು ಗುತ್ತಿಗೆಯಲ್ಲವೆಂದು ತಿದ್ದಿದರು. ಇದಕ್ಕೆ ಆಡಳಿತ ಪ್ರತಿಪಕ್ಷದ ಸಾಲಿನಿಂದ ಪ್ರತಿರೋಧ ವ್ಯಕ್ತವಾಯಿತು. ಪ್ರಾರ್ಥನೆಗೆ ಎಲ್ಲರೂ ಮುಂದೆ ಬಂದರೆ ಸಂತೋಷದ ಸಂಗತಿ ಎಂದು ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಹೊತ್ತೊಯ್ಯುವ ಆತಂಕ ಬೇಡ
ಅಂಬೇಡ್ಕರ್ ಸಂವಿಧಾನ ರಚನೆ ಕಾಲಕ್ಕೆ ರಾಜರ್ಷಿ, ರಾಜನೀತಿಜ್ಞ, ವಿಜ್ಞಾನಿ, ತತ್ವಜ್ಞಾನಿ, ದೇಶದ ಪ್ರಸಕ್ತ ಪರಿಸ್ಥಿತಿ ಅವಲೋಕಿಸಿದ್ದಾರೆ ಎಂದು ಭೋಜೇಗೌಡರು ಹೇಳುತ್ತಿರುವುದು ಶ್ಲಾಘನೀಯವೆಂದು ಎನ್.ರವಿಕುಮಾರ್ ಪ್ರಶಂಸಿಸಿದಾಗ ಕಾಂಗ್ರೆಸ್ನ ಕೆಲ ಸದಸ್ಯರು ‘ನೋಡಣ್ಣ ರಾಮನ ಹೆಸರೆತ್ತಿದ್ದಕ್ಕೆ ಅವರೆಲ್ಲ ಎಷ್ಟು ಖುಷಿಯಾಗವ್ರೆ ಎಂದರು. ಅರ್ಜಿ ಏನಾದರೂ ಹಾಕಿದ್ದೀರಾ ಎಂದು ನಗುತ್ತಾ ಕೇಳಿದರು. ಅಂತಹ ಆತಂಕವೇನೂ ನಿಮಗೆ (ಪ್ರತಿಪಕ್ಷಗಳು) ಬೇಡವೆಂದು ರವಿಕುಮಾರ್ ಚುಚ್ಚಿದರು. ಈ ಮಧ್ಯೆ ಜಯಮ್ಮ ‘ಸೀತೆಯನ್ನು ರಾವಣ ಅಪಹರಿಸಿದಂತೆ ನಮ್ ಭೋಜೇಗೌಡರನ್ನು ಎತ್ತಿಕೊಂಡು ಹೋದೀರಾ? ಎಂದು ನಗೆಚಟಾಕಿ ಹಾರಿಸಿದರೆ, ‘ನಿಮ್ಮನ್ನು (ಜಯಮ್ಮ) ಹೊತ್ತೊಯ್ಯುವಂತಹ ಸೀನ್ ಇಲ್ಲ ಬಿಡಿ’ ಎಂದು ಆಯನೂರು ಮಂಜುನಾಥ್ ಛೇಡಿಸಿದಾಗ ಸದನದಲ್ಲಿ ನಗು ತೇಲಿಬಂತು.