More

    ಕೌನ್ಸೆಲಿಂಗ್ ಕಡ್ಡಾಯ ಬಳಿಕವೂ ಅವಕಾಶ, ಶಿಕ್ಷಕರ ವರ್ಗ ನಿಯಮ ಸಡಿಲ

    ಬೆಂಗಳೂರು: ಸಾಮಾನ್ಯವಾಗಿ ಏಪ್ರಿಲ್ ಮತ್ತು ಮೇನಲ್ಲಿ ಸಾಮಾನ್ಯ ಗಣಕೀಕೃತ ಕೌನ್ಸೆಲಿಂಗ್ ಮೂಲಕ ನಡೆಸಲಾಗುವ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ಎರಡು ತಿಂಗಳ ಬಳಿಕವೂ ವಿಶೇಷ ಸನ್ನಿವೇಶದಲ್ಲಿ ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ಮಾಡಬಹುದೆಂಬ ಅಂಶವನ್ನೊಳಗೊಂಡ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ವಿಧೇಯಕ, 2020 ಮಂಗಳವಾರ ವಿಧಾನಸಭೆಯಲ್ಲಿ ಮಂಡನೆಯಾಯಿತು.

    ವರ್ಗಾವಣೆ ನಿಯಮದಿಂದ ಶಿಕ್ಷಕ ಸಮುದಾಯ ಎದುರಿಸುತ್ತಿದ್ದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಈ ವಿಧೇಯಕ ಮಹತ್ವ ಪಡೆದುಕೊಂಡಿದೆ. ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಶಿಕ್ಷಕರ ಲಭ್ಯತೆ, ಪಾರದರ್ಶಕತೆ, ಸಮಾನತೆ ಖಚಿತಪಡಿಸಿಕೊಳ್ಳಲು ಬದಲಾದ ಸ್ವರೂಪದಲ್ಲಿ ಶಿಕ್ಷಕರ ವರ್ಗಾವಣೆ ನಿಯಂತ್ರಿಸಲು ಈ ವಿಧೇಯಕ ಮಂಡಿಸಲಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ. ಈ ಮೂಲಕ ಪದವಿಪೂರ್ವ ಕಾಲೇಜಿನ ಉಪನ್ಯಾಸಕರು ಅಥವಾ ಪ್ರಾಂಶುಪಾಲರಿಗೆ ಸಂಬಂಧಿಸಿದ ಉಪ ಬಂಧಗಳನ್ನು ಹೊರತುಪಡಿಸಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳ (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ 2007 ಅನ್ನು (2007ರ ಕರ್ನಾಟಕ ಅಧಿನಿಯಮ 29) ನಿರಸನಗೊಳಿಸುವ ಪ್ರಸ್ತಾಪ ಮಾಡಿದೆ.

    ಮೊದಲು ಕಡ್ಡಾಯವಾಗಿ ಸಿ- ವಲಯದಲ್ಲೇ ಸ್ಥಳ ನಿಯೋಜನೆ ಮಾಡುವುದು, ವಲಯವಾರು ವರ್ಗಾವಣೆ, ಕೋರಿಕೆ ವರ್ಗಾವಣೆ, ಕೌನ್ಸೆಲಿಂಗ್ ವರ್ಗಾವಣೆ, ವರ್ಗಾವಣೆ ವಿನಾಯಿತಿಗಳು, ದಂಡಗಳು ಸೇರಿ ವಿವಿ ವಿಚಾರವನ್ನು ಪ್ರಸ್ತಾಪಿಸಲಾಗಿದೆ.

    ಶಿಕ್ಷಕನ ಪ್ರಾರಂಭಿಕ ನೇಮಕ ಅಥವಾ ಬಡ್ತಿಯ ಮೇಲೆ ಮೊದಲ ಸ್ಥಳ ನಿಯುಕ್ತಿಯನ್ನು ಮಾಡುವಾಗ ವಲಯ ‘ಸಿ’ ನಲ್ಲಿನ ಖಾಲಿ ಹುದ್ದೆ ತುಂಬಬೇಕು ಎಂಬುದನ್ನು ಸ್ಪಷ್ಟಪಡಿಸಲಾಗಿದೆ. ಶೇ.20ಕ್ಕಿಂತ ಹೆಚ್ಚಿನ ಖಾಲಿ ಹುದ್ದೆಗಳು ಇರುವ ತಾಲೂಕುಗಳಲ್ಲಿ ಆದ್ಯತೆ ಮೇಲೆ ಭರ್ತಿ ಮಾಡಬೇಕೆಂದೂ ಹೇಳಲಾಗಿದೆ. ಅತಿ ದೀರ್ಘಕಾಲ ತಾಲೂಕು ಮತ್ತು ಗ್ರಾಮೀಣ ಭಾಗದಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕರಿಗೆ ನಗರ ಪ್ರದೇಶದ ಶಾಲೆ ಆಯ್ಕೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕಾಗಿದೆ ಎಂದು ಸರ್ಕಾರ ಹೇಳಿಕೊಂಡಿದೆ.

    ನಿಯಮಿಸಲಾದ ‘ಶಿಷ್ಯ: ಶಿಕ್ಷಕ’ ಅನುಪಾತದ ಅನುಸಾರವಾಗಿ ಶಾಲೆಗಳಿಗೆ ಶಿಕ್ಷಕರನ್ನು ನಿಯತ ಕಾಲಾಂತರಗಳಲ್ಲಿ ಹುದ್ದೆಗಳನ್ನು ಸಮರ್ಪಕ ಮರುಹಂಚಿಕೆ ಮಾಡುವುದಕ್ಕೆ ಮತ್ತು ಮರು ನಿಯೋಜನೆ ಪ್ರಕ್ರಿಯೆಗೂ ಕೂಡ ಇದು ಅವಕಾಶ ಕಲ್ಪಿಸುತ್ತದೆ.

    ಶಿಕ್ಷಕರಿಗೆ ತಮ್ಮ ಆದ್ಯತೆಯ ಸ್ಥಳ ನಿಯುಕ್ತಿಗಳನ್ನು ಕೋರಲು ಆಯ್ಕೆಗಳು ಮತ್ತು ಫ್ಲೆಕ್ಸಿಬಲಿಟಿ ಕಲ್ಪಿಸುವ ಮೂಲಕ ಶಿಕ್ಷಕರ ವರ್ಗಾವಣೆ, ಸ್ಥಳ ನಿಯುಕ್ತಿ ಪ್ರಕ್ರಿಯೆ ಸುವ್ಯವಸ್ಥೆಗೊಳಿಸುವುದು ಅವಶ್ಯವೆಂದು ಪರಿಗಣಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಹೇಳಿಕೊಂಡಿದೆ.

    ಸಮರ್ಪಕ ಮರುಹಂಚಿಕೆ ಅಥವಾ ವಲಯವಾರು ವರ್ಗಾವಣೆ ಪರಿಣಾಮ ಒಂದು ಶಾಲೆಯಿಂದ ಮತ್ತೊಂದಕ್ಕೆ ಶಿಕ್ಷಕನ ವರ್ಗಾವಣೆಯಾದ ಪ್ರಕರಣದಲ್ಲಿ ಒಂದು ಶಾಲೆಯಲ್ಲಿ ಕನಿಷ್ಠ ಸೇವೆಯನ್ನು ಲೆಕ್ಕ ಹಾಕುವ ಉದ್ದೇಶಕ್ಕಾಗಿ ಹಿಂದಿನ ಶಾಲೆಯಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸತಕ್ಕದ್ದು ಎಂದು ಮಸೂದೆ ಹೇಳುತ್ತದೆ. ಈ ಮೂಲಕ ಶಿಕ್ಷಕರ ಬೇಡಿಕೆಯೊಂದಕ್ಕೆ ಕಿವಿಗೊಟ್ಟಂತಾಗಿದೆ.

    ಕಲ್ಯಾಣ ಕರ್ನಾಟಕ ಪ್ರದೇಶದ ಯಾವುದೇ ಆರು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಕ್ಷಕರು, ಕಲ್ಯಾಣ ಕರ್ನಾಟಕದ ಹೊರಗೆ ವರ್ಗಾವಣೆ ಕೋರುವುದಕ್ಕಾಗಿ, ಇತರ ಎಲ್ಲ ಅರ್ಹತಾ ಷರತ್ತುಗಳ ಜತೆಗೆ ಆ ಪ್ರದೇಶದಲ್ಲಿ ಕನಿಷ್ಠ 10 ವರ್ಷಗಳ ಸೇವೆ ಸಹ ಪೂರೈಸಿರಬೇಕಾಗುತ್ತದೆ. ಇನ್ನೊಂದು ಪ್ರಮುಖ ಸಂಗತಿ ಎಂದರೆ ವಾರ್ಷಿಕ ಶೇ.15 ಮಿತಿಯೊಳಗೆ ವರ್ಗಾವಣೆ ಮಾಡುವ ಪ್ರಸ್ತಾಪ ಮಾಡಲಾಗಿದೆ.

    ಒಪ್ಪಿಗೆಯಾದ್ರೆ ತಕ್ಷಣ ಲಾಗು: ಬಜೆಟ್ ಅಧಿವೇಶನದ ವೇಳೆ ಈ ವಿಧೇಯಕದ ಬಗ್ಗೆ ವ್ಯಾಪಕ ಚರ್ಚೆಯಾಗಿ ಶಾಸನ ಸಭೆಯಿಂದ ಒಪ್ಪಿಗೆ ಪಡೆದುಕೊಳ್ಳಲು ಸರ್ಕಾರ ಉದ್ದೇಶಿಸಿದೆ ಮತ್ತು ಮುಂದಿನ ವರ್ಗಾವಣೆಗೆ ಹೊಸ ಕಾನೂನು ಲಾಗು ಮಾಡಲು ಬಯಸಿದೆ.

    ವಿಶೇಷ ಅವಕಾಶ

    ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ ಯಾರೊಬ್ಬರೂ ಒಂದು ಸ್ಥಳ ಆಯ್ಕೆ ಮಾಡದಿದ್ದರೆ ಮತ್ತು ಅದನ್ನು ಶಿಷ್ಯ-ಶಿಕ್ಷಕ ಅನುಪಾತದ ಆಧಾರದ ಮೇಲೆ ಸಾರ್ವಜನಿಕ ಹಿತಾಸಕ್ತಿಯಲ್ಲಿ ಭರ್ತಿ ಮಾಡುವುದು ಅಗತ್ಯವಾಗಿದ್ದರೆ ರಾಜ್ಯ ಸರ್ಕಾರ ನಿಯಮಿಸಬಹುದೆಂದು

    ಸರ್ಕಾರ ಅವಕಾಶ ಮಾಡಿಕೊಂಡಿದೆ. ಕನಿಷ್ಠ ಸೇವಾವಧಿಯನ್ನು ಪೂರೈಸಿದ ಯಾವೊಬ್ಬ ಶಿಕ್ಷಕನನ್ನು ಅಂಥ ಸ್ಥಳಕ್ಕೆ ವರ್ಗಾವಣೆ ಮಾಡಬಹುದು ಎಂದು ಷರತ್ತು ಅನ್ವಯದೊಂದಿಗೆ ಹೊಸ ದಾರಿ ಕಂಡುಕೊಳ್ಳಲಾಗಿದೆ. ಇದೇ ವೇಳೆ ಮ್ಯಾನ್ಯುಯಲ್ ಕೌನ್ಸೆಲಿಂಗ್​ಗೆ ನಿಷೇಧ ಎಂದು ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಮ್ಯಾನ್ಯುಯಲ್ ವರ್ಗಾವಣೆ ಮಾಡಿದಲ್ಲಿ ಅವುಗಳನ್ನು ಅನೂರ್ಜಿತ ಮತ್ತು ಶೂನ್ಯವೆಂದು ಪರಿಗಣಿಸುವ ಜತೆಗೆ ವರ್ಗಾವಣೆ ಮಾಡಿದ ಅಧಿಕಾರಿ ವಿರುದ್ಧ ಶಿಸ್ತುಕ್ರಮಕ್ಕೆ ಗುರಿಯಾಗಬೇಕಾಗುತ್ತದೆ.

    ವರ್ಗ ವಿನಾಯಿತಿಗೆ ಷರತ್ತುಗಳು

    ಅಮಸರ್ಪಕ ಮರು ಹಂಚಿಕೆ ಸಂದರ್ಭದಲ್ಲಿ ಕೆಲ ವರ್ಗದ ಶಿಕ್ಷಕರಿಗೆ ಷರತ್ತು ಬದ್ಧ ವಿನಾಯಿತಿ ನೀಡಲು ಉದ್ದೇಶಿಸಲಾಗಿದೆ.

    ಕೊನೇ ಹಂತದ ಖಾಯಿಲೆ, ತೀವ್ರ ಅನಾರೋಗ್ಯ ಹೊಂದಿದ ಶಿಕ್ಷಕ ಅಥವಾ ಆತನ ಪತ್ನಿ, ಅಥವಾ ಆಕೆಯ ಪತಿ ಅಥವಾ ಮಕ್ಕಳು, ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ತಾಲೂಕಿನೊಳಗೆ ಚಿಕಿತ್ಸೆ ಲಭ್ಯವಿಲ್ಲದೇ ಇದ್ದರೆ

    12 ವರ್ಷ ಒಳಗಿನ ಅವಲಂಬಿತ ಮಕ್ಕಳನ್ನು ಹೊಂದಿರುವ ವಿಧವೆ ಅಥವಾ ವಿಧುರ, ವಿಚ್ಛೇದಿತ ಶಿಕ್ಷಕ

     

    ಭಾರತೀಯ ರಕ್ಷಣಾ ದಳ ಅಥವಾ ರೆ ಮಿಲಿಟರಿ ದಳಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸೈನಿಕ ಅಥವಾ ನಿವೃತ್ತ ಹೊಂದಿದ, ಶಾಶ್ವತವಾಗಿ ಅಂಗವಿಕಲರಾದ ಅಥವಾ ಮೃತ ಸೈನಿಕರ ಪತಿ- ಪತ್ನಿಯಾಗಿರುವ ಶಿಕ್ಷಕ

    ಗರ್ಭಿಣಿ ಶಿಕ್ಷಕಿ ಅಥವಾ ಒಂದು ವರ್ಷದ ಒಳಗಿನ ಮಗುವನ್ನು ಹೊಂದಿರುವ ಶಿಕ್ಷಕಿ

    ರಮೇಶ್​ಕುಮಾರ್-ಸುಧಾಕರ್ ಜಟಾಪಟಿ: ಪರಸ್ಪರ ಅಸಂಸದೀಯ ಪದ ಬಳಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts