

ತುಮಕೂರು: ಕಾಂಗ್ರೆಸ್ ಭವನಕ್ಕೆ ಅಕ್ರಮವಾಗಿ ಭೂಮಿ ಹಸ್ತಾಂತರ ಮಾಡಿರುವ ವಿವಾದವು ಸದನದಲ್ಲು ಪ್ರತಿಧ್ವನಿಸಿದೆ. ಮರಳೂರು ಗ್ರಾಮದ ಸರ್ವೆ ನಂ.87/2ರ 2 ಎಕರೆ ಜಮೀನನ್ನು ಕಾಂಗ್ರೆಸ್ ಭವನಕ್ಕೆ ನೀಡಿರುವ ಬಗ್ಗೆ ಸದನದಲ್ಲಿ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್ ತೀವ್ರ ಅಸಮಧಾನ ವ್ಯಕ್ತಪಡಿಸಿದರು.
ಬುಧವಾರ ರಾತ್ರಿ ಅಭಿವೃದ್ಧಿ ಕುರಿತ ಮುಂದುವರೆದ ಚರ್ಚೆ ವೇಳೆ ಈ ವಿಷಯವನ್ನು ಪ್ರಸ್ತಾಪಿಸಿದ ಜ್ಯೋತಿಗಣೇಶ್, 50 ಕೋ. ರೂ.,ಗು ಹೆಚ್ಚು ಬೆಲೆ ಬಾಳುವ ಮಹಾನಗರ ಪಾಲಿಕೆಯ ಆಸ್ತಿಯನ್ನು ಅತ್ಯಂತ ಕಡಿಮೆದರದಲ್ಲಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕೊಟ್ಟಿರುವ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಈ ಜಾಗ ಪಾಲಿಕೆಯ ಯೋಜನೆಗಳಿಗೆ ಉಪಯೋಗವಾಗಲಿ. ಕುಡಿಯುವ ನೀರಿನ ಶುದ್ಧೀಕರಣ ಘಟಕಕ್ಕೆ ಅಥವಾ ಪೌರಕಾರ್ಮಿಕರಿಗೆ ಮನೆ ಕಟ್ಟಿಕೊಡುವ ಉದ್ದೇಶಕ್ಕೆ ಉಪಯೋಗಿಸಲಿ. ನಗರದ ಹೃದಯ ಭಾಗದಲ್ಲಿರುವ ಈ ಆಸ್ತಿಯನ್ನು ಪಾಲಿಕೆಗೆ ಉಳಿಸಿ ಎಂದು ಒತ್ತಾಯಿಸಿದರು.
ಇ -ಆಸ್ತಿ ಜನಾಕ್ರೋಶ : ಇ-ಆಸ್ತಿ ನೋಂದಣಿ ದಿನದಿಂದ ದಿನಕ್ಕೆ ಸಾರ್ವಜನಿಕರು ತೀವ್ರ ತೊಂದರೆಗೀಡಾಗುತ್ತಿದ್ದು ಪಾಲಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಬಗ್ಗೆ ಏಷ್ಟು ಬಾರಿ ಹೇಳಿದರು ಅಧಿಕಾರಿಗಳು ಜನರನ್ನು ಗೊಳು ಉಯ್ಯುದುಕೊಳ್ಳುವುದನ್ನು ಬಿಟ್ಟಿಲ್ಲ. ಮಹಾನಗರಪಾಲಿಕೆಯಲ್ಲಿ ಬ್ರೋಕರ್ಗಳಿಗೆ ಆದ್ಯತೆ ನೀಡಲಾಗುತ್ತಿದೆ. ಸಾರ್ವಜನಿಕರು, ಹಿರಿಯ ನಾಗರೀಕರು ಇ-ಆಸ್ತಿಗಾಗಿ ಪರದಡುವಂತಾಗಿದೆ. ಪಾಲಿಕೆ ಅಧಿಕಾರಿಗಳು ಜನಾಕ್ರೋಶಕ್ಕೆ ತುತ್ತಾಗಲಿದ್ದಾರೆ ಎಂದು ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
500 ಕೋಟಿ ಅನುದಾನಕ್ಕೆ ಆಗ್ರಹ
ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರನ್ನು ವ್ಯವಸ್ಥಿತವಾಗಿ ಸರಬರಾಜು ಮಾಡಲು ಹಾಗೂ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಲು ಕಳೆದ 10 ವರ್ಷಗಳ ಹಿಂದೆ ಜನಸಂಖ್ಯೆ ಹಾಗೂ ಪ್ರದೇಶಾಭಿವೃದ್ಧಿಯ ಪ್ರಮಾಣಕ್ಕೆ ಅನುಗುಣವಾಗಿ 200 ರಿಂದ 300 ಕೋಟಿ ವೆಚ್ಚದಲ್ಲಿ ಯೋಜನೆ ಕೈಗೊಳ್ಳಲಾಗಿತ್ತು. ಈಗ ಎರಡರಷ್ಟು ಮನೆಗಳು ನಿಮಾರ್ಣಗೊಂಡಿದ್ದು ಕುಡಿಯುವ ನೀರು ಸಮರ್ಪಕ ಪೂರೈಕೆಗೆ 15 ಒವರ್ ಹೆಡ್ ಟ್ಯಾಂಕ್ಗಳನ್ನು ನಿರ್ಮಿಸಿಬೇಕಿದೆ. ಹಾಗೂ 2ನೇ ಹಂತದ ಒಳಚರಂಡಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಒಟ್ಟು 500 ಕೋಟಿ ರೂ., ಅನುದಾನದ ಅಗತ್ಯವಿದ್ದು, ರಾಜ್ಯ ಸರ್ಕಾರ ನೀಡುವಂತೆ ಜ್ಯೋತಿಗಣೇಶ್ ಮನವಿ ಮಾಡಿದರು.
ಪೊಲೀಸರು ಕ್ಷಮೆಯಾಚಿಸಲಿ
ಮಹಾನಗರಪಾಲಿಕೆ ಸ್ವತ್ತನ್ನು ಕಾಂಗ್ರೆಸ್ ಭವನಕ್ಕೆ ನೋಂದಣಿ ಮಾಡಿಕೊಡಲು ಉಪನೋಂದಣಿ ಕಚೇರಿಗೆ ಅಧಿಕಾರಿಗಳು ಹೋದಂತಹ ಸಂದರ್ಭದಲ್ಲಿ ಬಿಜೆಪಿ ತಡೆಯಲು ಮುಂದಾದಾಗ ಅಲ್ಲಿಗೆ ಏಕಾಏಕಿ ಬಂದಂತಹ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿರುವುದು ಖಂಡನೀಯ. ಈ ಕೂಡಲೇ ಘಟನೆಗೆ ಕಾರಣವಾದ ಪೊಲೀಸರು ಬಿಜೆಪಿ ಕಾರ್ಯಕರ್ತರ ಕ್ಷಮೆಯಾಚಿಸುವಂತೆ ಸದನದಲ್ಲಿ ಜ್ಯೋತಿಗಣೇಶ್ ಆಗ್ರಹಿಸಿದರು.