

ಮೂಡುಬಿದಿರೆ: ರಾಜ್ಯದ ಶೇ.50ಕ್ಕೂ ಅಧಿಕ ಮಹಿಳೆಯರು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಶೇ.65ರಿಂದ 68 ಮಹಿಳೆಯರಲ್ಲಿ ರಕ್ತಹೀನತೆಯ ಸಮಸ್ಯೆ ಇದೆ. ಮಹಿಳಾ ಸಬಲೀಕರಣವೆಂದರೆ ಮಹಿಳೆಯರಿಗೆ ಬರೇ ಶಿಕ್ಷಣ, ಅವಕಾಶ ನೀಡಿದರೆ ಸಾಲದು. ಯಶಸ್ವಿ ಮಹಿಳೆ ಹಿಂದೆ ಆಕೆಯ ಪುರುಷ ಮಾತ್ರವಲ್ಲದೆ ಕುಟುಂಬವೇ ಜತೆಗಿದ್ದರೆ ಆಕೆ ಅಸಾಧ್ಯವನ್ನೂ ಸಾಧಿಸಬಹುದು ಎಂದು ಡಾ.ಆಶಾ ಪಿ.ಹೆಗ್ಡೆ ಹೇಳಿದರು.
ಮೂಡುಬಿದಿರೆಯಲ್ಲಿ ಇನ್ನರ್ ವೀಲ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮೂಡುಬಿದಿರೆಯ ಪೌರ ಕಾರ್ಮಿಕರನ್ನು ಗೌರವಿಸಿ ಮಾತನಾಡಿದರು. ತಾಲೂಕಿನ ಡಿಜೆ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಇನ್ವರ್ಟರ್, ಬಾಬು ರಾಜೇಂದ್ರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನೋಟ್ಸ್ ಪುಸ್ತಕ ವಿತರಣೆ ಹಾಗೂ ಎಸ್ಸೆಸ್ಸೆಲ್ಸಿ, ಪಿಯುಸಿ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಕ್ಲಬ್ ವತಿಯಿಂದ ಗೌರವಿಸಲಾಯಿತು. ಜಿಲ್ಲಾ ಇನ್ನರ್ ವೀಲ್ ಪ್ರತಿನಿಧಿಗಳಾದ ದೀಪಾ ಭಂಡಾರಿ, ಚಿತ್ರಾ ರಾವ್ ಉಪಸ್ಥಿತರಿದ್ದರು.
ನಿರ್ಗಮನ ಕಾರ್ಯದರ್ಶಿ ದಾಮೋದರ್ ಕಳೆದ ಸಾಲಿನ ವರದಿ ಮಂಡಿಸಿದರು. ನಿರ್ಗಮನ ಅಧ್ಯಕ್ಷೆ ಸರಿತಾ ಆಶೀರ್ವಾದ್ ಸ್ವಾಗತಿಸಿದರು. ನೂತನ ಅಧ್ಯಕ್ಷೆ ಬಿಂದಿಯಾ ಶರತ್ ಸೇವೆಯೊಂದಿಗೆ ಸಂಭ್ರಮಿಸುವ ಯೋಜನೆಗಳನ್ನು ಹಂಚಿಕೊಂಡರು. ನೂತನ ಸದಸ್ಯರಾದ ಅನುಷಾ ಆಚಾರ್ ಮತ್ತು ವೀಣಾ ಆರ್.ಶೆಟ್ಟಿ ಅವರನ್ನು ಸ್ವಾಗತಿಸಲಾಯಿತು. ರೋಟರಿ ಅಧ್ಯಕ್ಷ ರವಿಪ್ರಸಾದ್ ಉಪಾಧ್ಯಾಯ ಕ್ಲಬ್ ಬುಲೆಟಿನ್ ಅನಾವರಣಗೊಳಿಸಿದರು. ಸಹನಾ ನಾಗರಾಜ್ ಮತ್ತು ಸೋನಿ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಡಾ.ಸೀಮಾ ಸುದೀಪ್ ವಂದಿಸಿದರು.