ಕುಮಾರಯ್ಯಗೆ ಕಸಾಪದಿಂದ ಅಭಿನಂದನೆ

IMG-20241031-WA0328
ಅರಸೀಕೆರೆ ಗ್ರಾಮಾಂತರ ತಾಲೂಕಿನ ಪನ್ನಸಮುಂದ್ರ ಗ್ರಾಮದ ಚಿಟ್ಟಿ ಮೇಳ ಕಲಾವಿದ ಕುಮಾರಯ್ಯ ಅವರನ್ನು ತಾಲೂಕು ಕಸಾಪ ವತಿಯಿಂದ ಸನ್ಮಾನಿಸಲಾಯಿತು. ಚಂದ್ರಶೇಖರ, ಮಹದೇವ್, ಸೀತಾರಾಂ, ಬಸವರಾಜು, ಪ್ರಭುದೇವ್ ಇದ್ದರು.
Published on

ಅರಸೀಕೆರೆ ಗ್ರಾಮಾಂತರ: ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ತಾಲೂಕಿನ ಕಸಬಾ ಹೋಬಳಿಯ ಪನ್ನಸಮುದ್ರ ಗ್ರಾಮದ ಕುಮಾರಯ್ಯ ಅವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಜಿ.ಎಸ್.ಚಂದ್ರಶೇಖರ್ ಬಾಬು ಮತ್ತು ತಂಡದಿಂದ ಸ್ವಗ್ರಾಮದಲ್ಲಿ ಗುರುವಾರ ಅಭಿನಂದಿಸಿದರು.

ತಾಲೂಕು ಕಸಾಪ ಅಧ್ಯಕ್ಷ ಚಂದ್ರಶೇಖರ್ ಬಾಬು ಮಾತನಾಡಿ, ಕುಮಾರಯ್ಯ ಅವರು ನಮ್ಮ ತಾಲೂಕಿನ ಪ್ರತಿಭಾವಂತ ಜಾನಪದ ಕ್ಷೇತ್ರದ ಚಂಡೆವಾದ್ಯದ ಕಲಾವಿದರಾಗಿದ್ದಾರೆ. ಇವರು 1994 ಇಸವಿಯಿಂದಲೂ ಈ ಕ್ಷೇತ್ರದಲ್ಲಿ ಗುರುತಿಸಿಕೊಂಡು ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ನೂರಾರು ಕಾರ್ಯಕ್ರಮಗಳನ್ನು ನಡೆಸಿಕೊಡುವುದರ ಮೂಲಕ ಚಿಟ್ಟಿಮೇಳ ಕಲೆಗೆ ಶಾಶ್ವತವಾದ ನೆಲೆ ನೀಡುತ್ತಿದ್ದಾರೆ. ಪ್ರಶಸ್ತಿ ಪುರಸ್ಕೃತರು ದೆಹಲಿಯ ಗಣರಾಜ್ಯೋತ್ಸವ ಸೇರಿದಂತೆ ಸ್ವಾತಂತ್ರ್ಯ ದಿನಾಚರಣೆ ಪರೇಡ್ ಸಂದರ್ಭದಲ್ಲಿ ಸ್ಥಳಿಯ ಕಲೆಯನ್ನು ಪ್ರದರ್ಶಿಸಿದ್ದಾರೆ. ನಶಿಸಿ ಹೋಗುತ್ತಿರುವ ಈ ಕಲೆಯನ್ನು ಜೀವಂತವಾಗಿ ಇಟ್ಟಿರುವ ಇವರನ್ನು ರಾಜ್ಯ ಸರ್ಕಾರ ಗುರುತಿಸಿ ಈ ಬಾರಿಯ ಕನ್ನಡ ರಾಜ್ಯೋತ್ಸವದಲ್ಲಿ ಪುರಸ್ಕರಿಸುತ್ತಿದೆ. ಕನ್ನಡ ನಾಡು ನುಡಿ ಸಂಸ್ಕೃತಿಗಳ ರಾಯಭಾರಿಯಾದ ಇವರನ್ನು ಸಮಸ್ತ ಕನ್ನಡ ಅಭಿಮಾನಿಗಳ ಪರವಾಗಿ ಇಂದು ಗೌರವಿಸಲಾಗುತ್ತಿದೆ ಎಂದರು.

ಮಾರ್ಗದರ್ಶಿ ಸಮಿತಿಯ ಸದಸ್ಯ ಎಚ್.ಟಿ. ಮಹದೇವ್, ಸಂಘಟನಾ ಕಾರ್ಯದರ್ಶಿ ಆರ್.ಟಿ.ಬಸವರಾಜ್, ರವಿ ಪ್ರಭುದೇವ್, ಹಿರಿಯ ಪತ್ರಕರ್ತ ಎಚ್.ಡಿ ಸೀತಾರಾಮ್ ಮತ್ತು ಕಸಾಪ ಪದಾಧಿಕಾರಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net