ಸಾಧನೆಗೆ ಸಂದ ಪದ್ಮಶ್ರೀ ಗೌರವ; ಡಾ. ವಿಜಯ ಸಂಕೇಶ್ವರ ಅವರನ್ನು ಅಭಿನಂದಿಸಿ ಸೋದರಿಯ ಪತ್ರ

VS
Published on

ಪ್ರೀತಿಯ ಅಣ್ಣನವರಾದ,

ಪದ್ಮಶ್ರೀ ಪುರಸ್ಕೃತ ಡಾ.ವಿಜಯ ಸಂಕೇಶ್ವರ ಅವರಿಗೆ ಅನಂತ ಅಭಿನಂದನೆಗಳು.

ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ

ಮಾ ಕರ್ಮಫಲಹೇರ್ಭರ್ವ ತೇ ಸಂಗೋಸ್ತ್ಚ ಕರ್ಮಣಿ||

‘ಪ್ರತಿಫಲಾಪೇಕ್ಷೆಯಿಲ್ಲದೇ ಕರ್ತವ್ಯವನ್ನು ಮಾಡು’ ಇದು ಶ್ರೀಕೃಷ್ಣ ಮಹಾಭಾರತದಲ್ಲಿ ಅರ್ಜುನನಿಗೆ ಹೇಳಿದ ಮಾತು, ಇದನ್ನು ಯಥಾವತ್ತಾಗಿ ಅರ್ಥೈಸಿಕೊಂಡ ಅರ್ಜುನ ನೀವೇ ಇರಬೇಕು, ನಿಮ್ಮ ಸಾಧನೆಯ ಕಾರ್ಯಗಳಿಗೆ ದಿನದ 24 ಗಂಟೆಗಳೂ ಸಾಲದು. ಪ್ರತಿ ಕ್ಷಣವೂ ಉತ್ಸಾಹದ ಚಿಲುಮೆಯಂತಿದ್ದು, ನಿರಂತರ ಕಾಯಕದಲ್ಲಿ ತೊಡಗಿಸಿಕೊಂಡು ಅಮೂಲ್ಯವಾದ ಮಾನವ ಜನ್ಮವನ್ನು ಸದುಪಯೋಗ ಪಡಿಸಿಕೊಂಡ ನೀವು ಅರ್ನ್ಯಘರತ್ನವೇ ಸರಿ. ನಿಮ್ಮನ್ನು ಹೆತ್ತ ತಾಯಿ, ಹೊತ್ತ ಭಾರತಾಂಬೆ ಧನ್ಯ.

ನಾನು ಚಿಕ್ಕಂದಿನಿಂದಲೂ ನೋಡಿದಂತೆ ನೀವು ಕಲ್ಲುಮುಳ್ಳಿನ ಹಾದಿ ಸವೆಸಿ, ಅವಮಾನ, ಅಸಹಾಯಕತೆಯಲ್ಲೂ ಒಂಟಿ ಯಾಗಿ ನಿಂತು ಹೋರಾಡಿ, ದಿಟ್ಟ ಹೆಜ್ಜೆ ಇಟ್ಟು ಸಾಧಿಸಿದ ಸಾಧನೆಯನ್ನು ಹೇಗೆ ವಿವರಿಸಲಿ, ಎಷ್ಟೆಂದು ಕೊಂಡಾಡಲಿ, ನನಗೆ ಶಬ್ದಗಳೇ ಸಿಗುತ್ತಿಲ್ಲ. ಸಾವಿರಾರು ಜನರ ಹೊಟ್ಟೆ ತುಂಬಿಸಿ, ಅನ್ನದಾತರೆನಿಸಿಕೊಂಡ ನೀವು, ಈಗಲೂ ಸ್ವಲ್ಪ ಸಮಯವನ್ನೂ ವ್ಯರ್ಥ ಮಾಡದೆ ದುಡಿಯುತ್ತಿರುವುದನ್ನು ನೋಡಿದರೆ ಬಹಳ ಸಂತಸವೆನಿಸುತ್ತದೆ. ನಿಮ್ಮ ಅವಿರತ ಶ್ರಮದಿಂದ ಕಟ್ಟಿದ ವಿಆರ್​ಎಲ್ ಸಂಸ್ಥೆ ಹಾಗೂ ಆದರ್ಶಪ್ರಾಯವಾದ ನಿಮ್ಮ ಹೆಸರು ಸೂರ್ಯ-ಚಂದ್ರರು ಇರುವವರೆಗೂ ಅಜರಾಮರವಾಗಿರಲಿ ಮತ್ತು ದಿನ ದಿನವೂ ಹೆಚ್ಚು ಹೆಚ್ಚು ಯಶಸ್ಸಿನ ಶಿಖರವೇರಿ ಇತಿಹಾಸದ ಪುಟಗಳಲ್ಲಿ ಸುವರ್ಣಾಕ್ಷರಗಳಲ್ಲಿ ಬರೆಯುವಂತಾಗಲಿ.

ಯಾವಾಗಲೂ ಹೊಸತನ್ನು ಕಂಡುಹಿಡಿಯುವ ನಿಮ್ಮ ತಲೆಯಲ್ಲಿ ಹತ್ತು ಥಾಮಸ್ ಅಲ್ವಾ ಎಡಿಸನ್ನರು ಇರಬಹುದು ಎಂದೆನಿಸುತ್ತದೆ. ಯಾವಾಗ, ಎಲ್ಲಿ, ಏನು ಸೃಷ್ಟಿ ಮಾಡುತ್ತೀರೋ ಗೊತ್ತಿಲ್ಲ. ಅಂತಹ ಧೀರವೀರ, ಶೂರ ನನ್ನ ಅಣ್ಣನೆಂದು ಹೇಳಿಕೊಳ್ಳಲು ಬಹಳ ಹೆಮ್ಮೆ ಎನಿಸುತ್ತದೆ. ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪಡೆದು, ಉದ್ಯೋಗ ರತ್ನ ಎನಿಸಿಕೊಂಡು ಈಗ ಪದ್ಮಶ್ರೀ ಪುರಸ್ಕೃತರಾದ ನಮ್ಮ ಹೆಮ್ಮೆಯ ಭಾರತರತ್ನ, ವಿಶ್ವಚೇತನಕ್ಕೆ ನನ್ನ ಕೋಟಿ ನಮನಗಳು.

‘ಅಪ್ಪ ಗುಡಿ ಕಟ್ಟಿದ, ಮಗ ಕಳಸವಿಟ್ಟನು’ ಎಂಬ ಹಿರಿಯರ ಮಾತು, ಹೆಗಲಿಗೆ ಹೆಗಲು ಕೊಟ್ಟು ಆಸರೆಯಾಗಿ ನಿಂತ ನಿಮ್ಮ ಮಗ ಆನಂದನಿಗೆ ಒಪ್ಪಿತವಾಗಿದೆ. ಅದೇ ರೀತಿ ಲಲಿತಾ ವೈನಿಯೂ ನಿಮ್ಮ ಅನೇಕ ಪ್ರಶಸ್ತಿಗಳ ಚೇತನವಾಗಿದ್ದಾರೆ. ಸೂರ್ಯನಿಗೆ ಸೂರ್ಯನೇ ಸಾಟಿ ಎನ್ನುವ ಹಾಗೆ ನಿಮ್ಮ ಸಾಧನೆಗೆ ಯಾವ ಪ್ರಶಸ್ತಿ ಕೊಟ್ಟರೂ ಕಡಿಮೆಯೇ, ನಿಮ್ಮ ಸಾಧನಾವೃಕ್ಷ ಸೊಂಪಾಗಿ ಬೆಳೆದು ಸಮೃದ್ಧ ಫಲ ಕೊಡಲಿ, ಪ್ರತಿ ಕ್ಷಣವನ್ನು ವ್ಯರ್ಥ ಮಾಡದೆ ಸಮಯಪ್ರಜ್ಞೆಯಿಂದ ನಡೆದುಕೊಳ್ಳುವ ರೀತಿ, ಜೀವನದ ಶಿಲ್ಪಿಯಾಗಿ ಬಹಳ ಕಷ್ಟಪಟ್ಟು ಕೆತ್ತಿದ ನಿಮ್ಮ ಸುಂದರ ವ್ಯಕ್ತಿತ್ವಕ್ಕೆ ನನ್ನ ಅನಂತ ಕೋಟಿ ವಂದನೆಗಳು. ದೇವರು ನಿಮಗೆ ಆಯುರಾರೋಗ್ಯ ಕೊಟ್ಟು ಸದಾ ಹಾರೈಸಲಿ.

ನಿನ್ನ ಪ್ರೀತಿಯ ತಂಗಿ

ಉಮಾ ಶ್ರೀಶೈಶಲಪ್ಪ ಪಟ್ಟಣಶೆಟ್ಟಿ ಗದಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net