

ಹಿರೀಸಾವೆ: ಸಮಾಜ ಸೇವಕ, ದಾನಿ ಹಾಗೂ ರಾಷ್ಟ್ರೀಯ ತೆಂಗು ಅಭಿವೃದ್ಧಿ ಮಂಡಳಿ ಮಾಜಿ ಅಧ್ಯಕ್ಷ ಕಬ್ಬಳಿ ಗ್ರಾಮದ ರಂಗೇಗೌಡ ಅವರ ನಿಧನಕ್ಕೆ ಶ್ರೀ ಆದಿಚಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.
ಶ್ರೀಯುತರು ಕೃಷಿ ಕಾಯಕದ ಜೊತೆಗೆ ಸಮಾಜದ ಅಭಿವೃದ್ಧಿಗೆ ದುಡಿದಿದ್ದಾರೆ. ರಂಗೇಗೌಡ ಅವರು 1987ರಿಂದ 1990ರವರೆಗೆ ರಾಷ್ಟ್ರೀಯ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತೆಂಗು ಬೆಳೆಗಾರರು ಎದುರಿಸುತ್ತಿದ್ದ ಹಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಿದ್ದನ್ನು ಜನತೆ ಇಂದಿಗೂ ಸ್ಮರಿಸುತ್ತಾರೆ. ಶ್ರೀ ಕ್ಷೇತ್ರ ಕಬ್ಬಳಿಯಲ್ಲಿರುವ ಶ್ರೀ ಬಸವೇಶ್ವರಸ್ವಾಮಿ ದೇವಾಲಯವನ್ನು ಆದಿಚುಂಚನಗಿರಿ ಮಠಕ್ಕೆ ವಹಿಸುವಲ್ಲಿ ಇವರು ವಹಿಸಿದ್ದ ಪಾತ್ರ ಸ್ಮರಣೀಯವಾದುದು. ಕಬ್ಬಳಿಯಲ್ಲಿ ಮಠದ ಶಿಕ್ಷಣ ಸಂಸ್ಥೆಗಳನ್ನು ತೆರೆಯುವುದರಲ್ಲಿ, ಅವುಗಳ ಅಭಿವೃದ್ಧಿಗೆ ನಿಸ್ವಾರ್ಥದಿಂದ ದುಡಿದಿದ್ದರು. ಬಸವೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಮಾಡುವ ಸಂದರ್ಭದಲ್ಲಿ ದೇಗುಲದ ಸನಿಹದಲ್ಲಿದ್ದ ತಮಗೆ ಪಿತ್ರಾರ್ಜಿತವಾಗಿ ಬಂದಿದ್ದ ಒಂದೂವರೆ ಎಕರೆ ಭೂಮಿಯನ್ನು ಶ್ರೀಮಠಕ್ಕೆ ದಾನವಾಗಿ ನೀಡಿದ್ದರು.
ರಂಗೇಗೌಡರು ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು 2022ನೇ ಸಾಲಿನ ಪ್ರತಿಷ್ಠಿತ ಚುಂಚಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. ಇಂತಹ ಸೇವಾ ತತ್ಪರರು ಇನ್ನಿಲ್ಲವಾದುದು ನಾಡಿಗೆ ಭರಿಸಲಾಗದ ನಷ್ಟವನ್ನುಂಟು ಮಾಡಿದೆ ಎಂದು ಸಂತಾಪ ಸೂಚಿಸಿದ್ದಾರೆ.