ಧರ್ಮಸ್ಥಳದ ವಿರುದ್ಧದ ಷಡ್ಯಂತ್ರಕ್ಕೆ ಖಂಡನೆ

IMG-20250830-WA0205
ತಿ.ನರಸೀಪುರ ತಾಲೂಕಿನ ತಲಕಾಡು ಗ್ರಾಮದಲ್ಲಿ ಶನಿವಾರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಷಡ್ಯಂತ್ರವನ್ನು ವಿರೋಧಿಸಿ ವಿವಿಧ ಸಂಘಟನೆಗಳು ಹಾಗೂ ಭಕ್ತರು ಧರ್ಮ ಯಾತ್ರೆ ಪ್ರತಿಭಟನೆ ನಡೆಸಿದರು. ಶ್ರೀನಿವಾಸರಾವ್, ಜಯಲಕ್ಷ್ಮಮ್ಮ, ವೆಂಕಟೇಶ್, ನಾಗರಾಜು, ಶಾಂತರಾಜು ಇತರರು ಇದ್ದರು.
Published on

ತಿ.ನರಸೀಪುರ: ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಖಂಡಿಸಿ ವಿವಿಧ ಸಂಘಟನೆಗಳ ಮುಖಂಡರು ಹಾಗೂ ಭಕ್ತರು ತಾಲೂಕಿನ ತಲಕಾಡು ಗ್ರಾಮದಲ್ಲಿ ಶನಿವಾರ ಪ್ರತಿಭಟನೆ ನಡೆಸಿದರು.

ತಲಕಾಡಿನಲ್ಲಿ ಧರ್ಮಸ್ಥಳದ ಧರ್ಮ ಯಾತ್ರೆಯ ಮೂಲಕ ಪ್ರತಿಭಟನೆ ನಡೆಸಿದ ಸಂಘಟನೆಗಳ ಮುಖಂಡರು ಹಾಗೂ ಭಕ್ತರು ಶ್ರೀ ಬಂಡರಸಮ್ಮ ದೇವಾಲಯದಿಂದ ನಾಡಕಚೇರಿವರೆಗೆ ಮೆರವಣಿಗೆಯಲ್ಲಿ ತೆರಳಿ ಧರ್ಮಸ್ಥಳಕ್ಕೆ ಕಳಂಕ ತರುವ ನಿಟ್ಟಿನಲ್ಲಿ ಕೆಲಸ ಮಾಡಿದವರ ವಿರುದ್ಧ ಧಿಕ್ಕಾರ ಕೂಡಿದರು. ಬಳಿಕ ಕಂದಾಯ ಇಲಾಖೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಧರ್ಮಸ್ಥಳದ ಮಂಜುನಾಥನ ಭಕ್ತರಾದ ಎಂ.ಜಯಲಕ್ಷ್ಮಮ್ಮ ಮಾತನಾಡಿ, ಹಿಂದು ಧರ್ಮದ ವಿರುದ್ಧ ಹಾಗೂ ಧರ್ಮಸ್ಥಳದ ಮೇಲೆ ನಡೆಸುತ್ತಿರುವ ಕಿಡಿಗೇಡಿಗಳ ಅಪಪ್ರಚಾರಕ್ಕೆ ಈಗಾಗಲೇ ತಕ್ಕ ಶಾಸ್ತಿಯಾಗಿದ್ದು, ಕಿಡಿಗೇಡಿಗಳ ಮೂಲ ಯಾರೆಂದು ಪತ್ತೆ ಹಚ್ಚಿ ಅವರಿಗೆ ಮಂಜುನಾಥಸ್ವಾಮಿ ಹಾಗೂ ನ್ಯಾಯಾಲಯ ತಕ್ಕ ಶಿಕ್ಷೆಯನ್ನು ನೀಡಬೇಕೆಂದು ಆಗ್ರಹಿಸಿದರು.

ಕಸಾಪ ತಾಲೂಕು ಅಧ್ಯಕ್ಷ ವೆಂಕಟೇಶ್ ವಿನಾಯಕ ಮಾತನಾಡಿ, ಧರ್ಮಸ್ಥಳಕ್ಕೆ ಕಳಂಕ ತಂದಿರುವ ಕಿಡಿಗೇಡಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮವನ್ನು ಕೈಗೊಳ್ಳಬೇಕು. ನಮ್ಮ ಜಿಲ್ಲೆಯ ಧಾರ್ಮಿಕ ನೆಲೆಗಳಾದ ಮಹದೇಶ್ವರ ಬೆಟ್ಟ, ಚಾಮುಂಡಿ ಬೆಟ್ಟ, ಬಿಳಿಗಿರಂಗನ ಬೆಟ್ಟಕ್ಕೂ ಧಾರ್ಮಿಕ ಸಂಕಷ್ಟವನ್ನು ತಂದು ಹಿಂದು ಧರ್ಮಕ್ಕೆ ಭಂಗ ತರುವಂತಹ ವ್ಯಕ್ತಿಗಳನ್ನು ಹುಟ್ಟಿಕೊಳ್ಳುವ ಮೊದಲೇ ಧರ್ಮಸ್ಥಳದ ಕಳಂಕಿತರಿಗೆ ಉಗ್ರ ಶಿಕ್ಷೆಗೆ ಗುರಿ ಮಾಡಬೇಕು. ಇದರಿಂದ ಷಡ್ಯಂತರ ಮಾಡುವ ಕಿಡಿಗೇಡಿಗಳಿಗೆ ಒಂದು ಪಾಠವಾಗಲಿದೆ ಎಂದರು.

ಪ್ರತಿಭಟನೆಯಲ್ಲಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ಜಿ.ನಾಗರಾಜು, ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಶಾಂತರಾಜು, ಕಾರ್ಯದರ್ಶಿ ಟಿ.ಆರ್. ಶ್ರೀನಿವಾಸರಾವ್, ರೈತ ಸಂಘದ ಉಪಾಧ್ಯಕ್ಷ ದಿನೇಶ್, ಡೈರಿ ಅಧ್ಯಕ್ಷ ನರೇಂದ್ರ, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ, ಉಪಾಧ್ಯಕ್ಷ ಶಂಕರ್, ಹಸ್ತಿಕೇರಿ ನಾಗರಾಜು, ನಾಗೇಶ್, ಟಿ.ಜೆ.ಮಹದೇವ್, ರುದ್ರೇಶ್, ಶ್ರೀನಿವಾಸ್ ಗೌಡ, ಪ್ರಶಾಂತ್, ಕೃಷ್ಣ, ಪುಟ್ಟಸ್ವಾಮಿ ಮಹದೇವ ಸೇರಿದಂತೆ ನೂರಾರು ಸಂಖ್ಯೆ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net