

ಹಾಸನ: ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿ ವಿಳಂಬವಾಗುತ್ತಿರುವುದನ್ನು ಖಂಡಿಸಿ ಶುಕ್ರವಾರ ಎಬಿವಿಪಿ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ರಾಜ್ಯದ 432 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸುಮಾರು 6 ಸಾವಿರ ಕಾಯಂ ಉಪನ್ಯಾಸಕರ ಅಗತ್ಯವಿದ್ದರೆ, ಈಗ ಕೇವಲ 3 ಸಾವಿರ ಜನರ ಕಾಯಂ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಉಳಿದ ಅಗತ್ಯವನ್ನು ಪೂರೈಸಲು ಪ್ರತಿ ವರ್ಷ 12000ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿಸಬೇಕಾಗುತ್ತದೆ. ಆದರೆ ಈ ಶೈಕ್ಷಣಿಕ ಸಾಲಿನಲ್ಲಿ 2 ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಪಠ್ಯಕ್ರಮಕ್ಕೆ ಗಂಭೀರವಾಗಿ ಹಿನ್ನಡೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಉಚ್ಚ ನ್ಯಾಯಾಲಯದ ಮಧ್ಯಂತರ ಆದೇಶದಂತೆ ಅರ್ಹ ಅತಿಥಿ ಉಪನ್ಯಾಸಕರನ್ನು ತಕ್ಷಣ ನೇಮಿಸಬೇಕಿತ್ತು. ಸರ್ಕಾರ ಅದನ್ನು ನಿರ್ಲಕ್ಷಿಸುತ್ತಿದೆ. ಇದರಿಂದ ಕಾಲೇಜುಗಳ ಶಿಕ್ಷಣ ವ್ಯವಸ್ಥೆ ಕುಸಿತದ ದಾರಿಯಲ್ಲಿ ಸಾಗುತ್ತಿದೆ ಎಂದು ವಿದ್ಯಾರ್ಥಿ ಮುಖಂಡರು ಆರೋಪಿಸಿದರು.
ರಾಜ್ಯದ ಅನೇಕ ಕಾಲೇಜುಗಳಲ್ಲಿ ಕಾಯಂ ಪ್ರಾಂಶುಪಾಲರ ಕೊರತೆ, ಕಾಯಂ ಉಪನ್ಯಾಸಕರ ಕೊರತೆ ಹಾಗೂ ಅತಿಥಿ ಉಪನ್ಯಾಸಕರ ತೀವ್ರ ಅಭಾವದಿಂದ ಪದವಿ ಶಿಕ್ಷಣದ ಗುಣಮಟ್ಟ ಹದಗೆಡುತ್ತಿದೆ. ವಿಶ್ವವಿದ್ಯಾಲಯಗಳಿಂದ ಹೊರಬರುತ್ತಿರುವ ಪದವೀಧರರ ಭವಿಷ್ಯ ಅತಂತ್ರವಾಗಿದೆ ಎಂದು ಕಳವಳವ್ಯಕ್ತಪಡಿಸಿದರು.
ಪ್ರತಿಭಟನಾಕಾರರು, ಯುಜಿಸಿ ನಿಯಮಾವಳಿ ಅನುಸರಿಸಿ ಅರ್ಹತೆ ಪಡೆದ 20 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಸೇವೆಗಾಗಿ ಕಾಯುತ್ತಿದ್ದಾರೆ. ಸರ್ಕಾರ ತಕ್ಷಣವೇ ಎಲ್ಲ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ, ಅತಿಥಿ ಉಪನ್ಯಾಸಕರ ನೇಮಕಾತಿ ಪ್ರಕ್ರಿಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿಗಳು ತಮ್ಮ ಬೇಡಿಕೆಗಳನ್ನು ಜಿಲ್ಲಾಡಳಿತಕ್ಕೆ ಲಿಖಿತ ಮನವಿ ಮೂಲಕ ಸಲ್ಲಿಸಿದ್ದು, ಶೈಕ್ಷಣಿಕ ಕ್ಷೇತ್ರವನ್ನು ಆದ್ಯತಾ ವಲಯವೆಂದು ಪರಿಗಣಿಸಿ ತ್ವರಿತ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದರು.