ತಿರುವು ರಸ್ತೆಯಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿ ಪಲ್ಟಿಯಾಗಿ ಅಪಘಾತ; 4 ಗಂಟೆಗಳ ಕಾಲ ಟ್ರಾಫಿಕ್ ಜಾಮ್​..

Lorry
Published on

ಯಶವಂತಪುರ: ರಾಜಧಾನಿ ಬೆಂಗಳೂರಿನಲ್ಲಿ 29 ಟನ್ ತೂಕದ ಕಾಂಕ್ರೀಟ್ ಮಿಕ್ಸರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಯ ವಿಭಜಕಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದ ಪರಿಣಾಮ ಸುದೀರ್ಘ 4 ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.

ಕೆಂಗೇರಿ ಉಪನಗರದಿಂದ ಯಶವಂತಪುರಕ್ಕೆ ತೆರಳುವ ಶಿರ್ಕೆ ಅಪಾರ್ಟ್​​ಮೆಂಟ್​​ ತಿರುವಿನ ರಿಂಗ್ ರಸ್ತೆಯಲ್ಲಿ ವಿಭಜಕದ ಮಧ್ಯೆ ಬಿದ್ದಿದ್ದರಿಂದ ಎರಡು ಬದಿಯ ವಾಹನ ಸವಾರರು ಪರದಾಡುವಂತಾಯಿತು.

ಮುಂಜಾನೆ 6ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಸಂಚಾರ ಅಸ್ತವ್ಯಸ್ತಗೊಂಡು ನಾಲ್ಕೈದು ಗಂಟೆಗಳ ಕಾಲ ಟ್ರಾಫಿಕ್ ಜಾಮ್ ಉಂಟಾದ ಪರಿಣಾಮ ವಾಹನ ಸವಾರರು ಓಡಾಡಲು ಪರದಾಡಿದರು.

ಸ್ಥಳಕ್ಕೆ ಧಾವಿಸಿದ್ದ ಕೆಂಗೇರಿ ಮತ್ತು ಕಾಮಾಕ್ಷಿಪಾಳ್ಯ ಸಂಚಾರಿ ಪೊಲೀಸರು ಟ್ರಾಫಿಕ್ ನಿಯಂತ್ರಣ ಮಾಡಲು ಹರಸಾಹಸ ಪಟ್ಟರು. ಮೂರು ಕ್ರೇನ್​ಗಳ ಸಹಾಯದಿಂದ ಲಾರಿಯನ್ನು ಮೇಲೆತ್ತಿ, ಸುಗಮ ಸಂಚಾರಕ್ಕೆಅನುವು ಮಾಡಿಕೊಟ್ಟರು.

ಘಟನೆಯಲ್ಲಿ ಸಿಮೆಂಟ್ ಮಿಕ್ಸರ್ ಲಾರಿ ನಜ್ಜುಗುಜ್ಜಾಗಿದ್ದು, ಮುಂಜಾಗ್ರತ ಕ್ರಮವಾಗಿ ಲಾರಿಯಲ್ಲಿದ್ದ ಡೀಸೆಲ್ ಹೊರತೆಗೆದು, ಮೇಲೆತ್ತಲಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಸ್ಪೀಡ್ ಬ್ರೇಕರ್ಸ್ ಇದ್ದರೂ, ಅಪಾಯಕಾರಿ ಚಾಲನೆ ಮಾಡಿದ ಚಾಲಕನ ವಿರುದ್ಧ ಕೇಸು ದಾಖಲಾಗಿದೆ, ಅಪಘಾತದ ಸಮಯದಲ್ಲಿ ವಾಹನಗಳು ಸಂಚರಿಸದ ಕಾರಣ ಯಾವುದೇ ಅಹಿತಕರ ಘಟನೆ ಸಂಭವಿಸಿಲ್ಲ.

ತಿರುವು, ಕಾಂಕ್ರೀಟ್ ರಸ್ತೆ, ಅತಿ ವೇಗವಾಗಿ ಚಲಿಸುವ ವಾಹನಗಳು, ಹೆಚ್ಚು ಅಪಘಾತಗಳು ಸಂಭವಿಸುವ ಪ್ರದೇಶವಾಗಿರುವುದರಿಂದ ಸಂಭಂದಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹಾರಕ್ಕೆ ಗಮನಹರಿಸಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net