

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಸರ್ಕಾರ ಮತ್ತು ಬ್ಯಾಂಕಿನಿಂದ ಆರ್ಥಿಕ ನೆರವು ಪಡೆದುಕೊಂಡು ಕೃಷಿಯನ್ನು ಉದ್ಯಮವನ್ನಾಗಿ ಮಾಡಲು ಅವಕಾಶ ಇದೆ. ಕೃಷಿ ಚಟುವಟಿಕೆಗೆ ಬ್ಯಾಂಕ್ ಕಡಿಮೆ ಬಡ್ಡಿ ದರದಲ್ಲಿ ಬೇಕಾದಷ್ಟು ಸಾಲ ನೀಡುತ್ತದೆ. ಅದರ ಸದುಪಯೋಗ ಮಾಡಿಕೊಂಡು ಕೃಷಿ ಉದ್ಯಮಿಗಳಾಗಿ, ಜೊತೆಗೆ ಇತರರಿಗೂ ಬ್ಯಾಂಕಿನ ನೆರವು ಪಡೆದುಕೊಳ್ಳುವಂತೆ ಪ್ರೇರಣೆ ನೀಡಿ ಎಂದು ಕೆನರಾ ಬ್ಯಾಂಕ್ ಮಂಗಳೂರು ವೃತ್ತ ಕಚೇರಿಯ ಮಹಾ ಪ್ರಬಂಧಕ ಸುಧಾಕರ ಕೊಟ್ಟಾರಿ ಹೇಳಿದರು.
ಉಜಿರೆ ರುಡ್‌ಸೆಟ್ ಸಂಸ್ಥೆಯಲ್ಲಿ 13 ದಿನ ನಡೆದೆ ಕೃಷಿ ಉದ್ಯಮ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಪ್ರಮಾಣಪತ್ರ ಮತ್ತು ಕೆನರಾ ಬ್ಯಾಂಕಿನಲ್ಲಿ ಹೊಸತಾಗಿ ಆರಂಭಿಸಿದ ಜನಧನ ಖಾತೆ ಹಾಗೂ ಕೆನರಾ ಏಂಜೆಲ್ ಖಾತೆಯ ಪುಸ್ತಕ ವಿತರಿಸಿ ಮಾತನಾಡಿ, ಸ್ವ ಉದ್ಯೋಗ ನಮ್ಮ ಹೆಮ್ಮೆಯ ವೃತ್ತಿಯಾಗಬೇಕು. ಪಡೆದ ತರಬೇತಿಯನ್ನು ಉಪಯೋಗಿಸಿಕೊಂಡು ಯಶಸ್ವಿಯಾಗಿ ಉದ್ಯಮ ನಡೆಸಿ ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ಎನ್‌ಆರ್‌ಎಲ್‌ಎಂ ಘಟಕದ ಜಿಲ್ಲಾ ಕಾರ್ಯಕ್ರಮ ಸಂಯೋಜಕ ಹರಿಪ್ರಸಾದ್, ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ.ವಿಜಯ ಕುಮಾರ್ ಉಪಸ್ಥಿತರಿದ್ದರು. ರುಡ್‌ಸೆಟ್ ನಿರ್ದೇಶಕ ಅಜೇಯ ಸ್ವಾಗತಿಸಿದರು. ಸಂಸ್ಥೆಯ ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ನಿರೂಪಿಸಿದರು. ಉಪನ್ಯಾಸಕ ಕೆ.ಕರುಣಾಕರ ಜೈನ್ ವಂದಿಸಿದರು.