

ಹನೂರು: ತಾಲೂಕಿನ ಮಲೆ ಮಹದೇಶ್ವರಬೆಟ್ಟ ತಪ್ಪಲಿನ ತೊಳಸಿಕೆರೆ ಗ್ರಾಮದಲ್ಲಿ ನಿಷ್ಕ್ರಿಯವಾಗಿರುವ ಸೋಲಾರ್ ಘಟಕವನ್ನು ರಿಪೇರಿ ಮಾಡಿಸಿ ವಿದ್ಯುತ್ ಸೌಕರ್ಯ ಒದಗಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕಳೆದ 5 ವರ್ಷದ ಹಿಂದೆ ಗ್ರಾಮದಲ್ಲಿ ಸೆಸ್ಕ್ ಇಲಾಖೆ ವತಿಯಿಂದ ದೀನ ದಯಾಳ್ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಡಿ ಸೋಲಾರ್ ಘಟಕವನ್ನು ಸ್ಥಾಪಿಸಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿತ್ತು. ಆದರೆ ಕಳೆದ ವರ್ಷ ಸೋಲಾರ್ ಬ್ಯಾಟರಿ ಸಾಮರ್ಥ್ಯ ಕ್ಷೀಣಿಸಿ, ಕೇಬಲ್‌ಗಳು ದುರಸ್ತಿಗೊಂಡಿದ್ದವು. ಇದರಿಂದ ರಾತ್ರಿಯನ್ನು ಕತ್ತಲೆಯಲ್ಲೇ ಕಳೆಯಬೇಕಿತ್ತು. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ ಬಳಿಕ ಸೋಲಾರ್ ರಿಪೇರಿ ಮಾಡಿ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿತ್ತು. ಆದರೀಗ ಮತ್ತೆ ಕಳೆದ ಒಂದು ತಿಂಗಳಿನಿಂದ ಇದೇ ರೀತಿಯ ಸಮಸ್ಯೆ ಎದುರಾಗಿದೆ. ರಾತ್ರಿಯನ್ನು ದೀಪದ ಬೆಳಕಿನಲ್ಲಿ ಕಳೆಯಬೇಕಿದೆ ಎಂದು ದೂರಿದರು.
ಚುನಾವಣೆ ವೇಳೆ ಜಿಲ್ಲಾಧಿಕಾರಿ ಅವರು ಗ್ರಾಮಕ್ಕೆ ಆಗಮಿಸಿ ವಿದ್ಯುತ್ ಸೌಕರ್ಯವನ್ನು ಒದಗಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಕಾರ್ಯವಾಗಿಲ್ಲ. ಇದೀಗ ಕಳೆದ ಒಂದು ತಿಂಗಳಿನಿಂದ ಸೋಲಾರ್ ದುರಸ್ತಿಗೊಂಡಿರುವುದರಿಂದ ವಿದ್ಯುತ್ ಸೌಕರ್ಯ ಇಲ್ಲದಂತಾಗಿದೆ. ಯಾವೊಬ್ಬ ಅಧಿಕಾರಿಯೂ ಇತ್ತ ತಿರುಗಿ ನೋಡಿಲ್ಲ. ಇನ್ನು ಮೊಬೈಲ್ ಚಾರ್ಜ್ ಮಾಡಲು ಕೂಡ ಸಾಧ್ಯವಾಗದ ಪರಿಸ್ಥಿತಿ ಇದೆ. ಇದರಿಂದ ಕೂಲಿ ಕೆಲಸಕ್ಕೆ ಬೇರೆಡೆಗೆ ತೆರಳಿರುವ ಕುಟುಂಬಸ್ಥರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.
ಸಂಬಂಧಪಟ್ಟವರು ಇತ್ತ ಗಮನಹರಿಸಿ ಒಂದು ವಾರದೊಳಗೆ ಸಮಸ್ಯೆ ಬಗೆಹರಿಸಬೇಕು. ತಪ್ಪಿದಲ್ಲಿ ಹನೂರು ಸೆಸ್ಕ್ ಕಚೇರಿಗೆ ಎದುರು ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ತಿಳಿಸಿದ್ದಾರೆ.