

ಗುಂಡ್ಲುಪೇಟೆ: ತಾಲೂಕಿನ ಕೊಡಸೋಗೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಪಟ್ಟಣದ ಡಿ.ದೇವರಾಜ ಅರಸು ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ, ಪ್ರಶಸ್ತಿ ಹಾಗೂ ಪಾರಿತೋಷಕ ಪಡೆದಿದ್ದಾರೆ.
ಸಹ ಶಿಕ್ಷಕ ಸಿದ್ದಲಿಂಗದೇವರು ಹಾಗೂ ಜಗದೀಶ್ ಮಾರ್ಗದರ್ಶನದಲ್ಲಿ ಅಭ್ಯಾಸ ಮಾಡಿದ ವಿದ್ಯಾರ್ಥಿಗಳು ಕಬಡ್ಡಿ, ಷಾಟ್‌ಪುಟ್, ಲಾಂಗ್ ಜಂಪ್‌ನಲ್ಲಿ ಮೊದಲನೇ ಸ್ಥಾನ, ಡಿಸ್ಕಸ್ ಥ್ರೋ, ಹೈಜಂಪ್ ಹಾಗೂ ಖೋಖೋ ಸ್ಪರ್ಧೆಯಲ್ಲಿ ಎರಡನೇ ಸ್ಥಾನ ಪಡೆದುಕೊಂಡರು.
ಜಯಗಳಿಸಿದ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕ ಮುಕ್ತಾರ್ ಪಾಷಾ, ಅತಿಥಿ ಶಿಕ್ಷಕ ನಾಗಮಣಿ, ಮಹೇಶ್ವರಿ, ಮುರುಗನ್, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಕುಮಾರ್ ಹಾಗೂ ಗ್ರಾಮಸ್ಥರು ಅಭಿನಂದಿಸಿದ್ದಾರೆ.