

ಮಾನ್ವಿ: ಸಮಗ್ರ ಕೃಷಿ ಪದ್ಧತಿ, ಸಮಗ್ರ ಕೀಟ ಮತ್ತು ರೋಗ ನಿಯಂತ್ರಣ ಪದ್ಧತಿ ಅನುಸರಿಸಿದರೆ ರೈತರು ವ್ಯವಸಾಯದಲ್ಲಿ ಲಾಭ ಪಡೆಯಲು ಸಾಧ್ಯ ಎಂದು ರಾಯಚೂರು ಕೃಷಿ ವಿಜ್ಞಾನಗಳ ವಿವಿ ಕೀಟಶಾಸ್ತ್ರ ವಿಜ್ಞಾನಿ ಡಾ.ಶ್ರೀವಾಣಿ ಹೇಳಿದರು.
ಇದನ್ನೂ ಓದಿ: ಕೃಷಿ ಭೂಮಿಗೆ ನುಗ್ಗಿದ ಅಣೆಕಟ್ಟು ನೀರು
ತಾಲೂಕಿನ ಕುರ್ಡಿ ಗ್ರಾಮದಲ್ಲಿ ಶನಿವಾರ ರಾಯಚೂರು ಕೃಷಿ ವಿಜ್ಞಾನಗಳ ವಿವಿ, ವಿವಿದ ಇಲಾಖೆಗಳಿಂದ ಹಮ್ಮಿಕೊಂಡಿದ್ದ ವಿಕಸಿತ ಕೃಷಿ ಸಂಕಲ್ಪ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು. ಕೃಷಿ ವಿವಿಯಿಂದ ಪರಿಸರಕ್ಕೆ ಪೂರಕವಾದ ಬೆವೆರಿಯಾ ಬ್ಯಾಸಿಯಾನಾ ಎನ್ನುವ ಜೈವಿಕ ಶಿಲೀಂದ್ರ ಕೀಟನಾಶಕ ಹಾಗೂ ಟ್ರೈಕೋಡರ್ಮ ಜೈವಿಕ ಶಿಲೀಂದ್ರ ನಾಶಕವನ್ನು ಅಭಿವೃದ್ಧಿಪಡಿಸಿದ್ದು, ರೈತರು ಬಳಸಿ ಕೀಟ ಮತ್ತು ರೋಗ ಬಾರದಂತೆ ಬೆಳೆ ಕಾಪಾಡಿಕೊಳ್ಳಬಹುದು.
ಮುಂಗಾರು ಆರಂಭವಾಗಿರುವುದರಿಂದ ರೈತರಿಗೆ ಮಣ್ಣು ಪರೀಕ್ಷೆ, ಬೆಳೆ ವಿಮೆ, ಬೆಳೆಸಾಲ, ಬಿತ್ತನೆ ಬೀಜ, ತೋಟಗಾರಿಕೆ ಬೆಳೆಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಜಿಲ್ಲೆಯ ವಿವಿಧ ತಾಲೂಕುಗಳ ರೈತರೊಂದಿಗೆ ಕೃಷಿ ವಿಜ್ಞಾನಿಗಳ ತಂಡದಿಂದ ನೇರ ಸಂವಾದ ಕಾರ್ಯಕ್ರಮವನ್ನು ಜೂ.12ರವರೆಗೆ ಹಮ್ಮಿಕೊಳ್ಳಲಾಗಿದೆ ಎಂದರು.
ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ತೋಟಗಾರಿಕೆ ವಿಜ್ಞಾನಿ ಡಾ.ಹರೀಶಕುಮಾರ ಮಾತನಾಡಿ, ರೈತರು ತರಕಾರಿ ಹಾಗೂ ತೋಟಗಾರಿಕೆ ಬೆಳೆ ಬೆಳೆಯುವುದರಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯವಾಗುತ್ತದೆ. ನಮ್ಮ ಸಂಸ್ಥೆಯಿಂದ ತರಕಾರಿ ಹಾಗೂ ತೋಟಗಾರಿಕೆ ಬೆಳೆ ಬೆಳೆಯುವುದಕ್ಕೆ ಅಗತ್ಯವಾದ ತಂತ್ರಜ್ಞಾನ ಹಾಗೂ ಮಾಹಿತಿ, ಸುಧಾರಿತ ಬೀಜಗಳನ್ನು ರೈತರಿಗೆ ನೇರವಾಗಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಕುರ್ಡಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಾ.ಶಿವಶಂಕರ, ಬೇಸಾಯ ಶಾಸ್ತ್ರಜ್ಞರಾದ ಡಾ.ಮಲ್ಲರೆಡ್ಡಿ, ಬೆಳೆ ಶಾರೀರ ಶಾಸ್ತ್ರ ವಿಜ್ಞಾನಿ ಡಾ.ಆಫ್ಸಾನಾ ಬಾನು, ಅನುವಂಶಿಕತೆ ಹಾಗೂ ಸಸ್ಯ ತಳಿ ಅಭಿವೃದ್ಧಿ ವಿಜ್ಞಾನಿ ಡಾ.ಉಮೇಶಬಾಬು, ಬೆಂಗಳೂರಿನ ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯ ತೋಟಗಾರಿಕಾ ವಿಜ್ಞಾನಿ ಡಾ.ನಾಗರಾಜ, ಕೃಷಿ ಸಖಿಯರಾದ ಅಂಬಿಕಾ, ದೇವಮ್ಮ, ಸಿದ್ಧಲಿಂಗಮ್ಮ, ನಾಗರತ್ನಾ, ರೈತರು ಇದ್ದರು.