

ಮಳವಳ್ಳಿ: ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ವಿಚಾರವಾದಿ ಕೆ.ಎಸ್.ಭಗವಾನ್ ಅವರನ್ನು ಬಂಧಿಸುವಂತೆ ಒತ್ತಾಯಿಸಿ ಸೋಮವಾರ ತಾಲೂಕಿನ ವಿವಿಧ ಒಕ್ಕಲಿಗರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಯಿತು.
ಪಟ್ಟಣದ ಅನಂತ ರಾಮ್ ವೃತ್ತದಲ್ಲಿ ಜಮಾವಣೆಗೊಂಡ ಸಮುದಾಯದವರು ಮಾನವ ಸರಪಳಿ ರಚಿಸಿ ವಾಹನ ಸಂಚಾರ ತಡೆದು ಭಗವಾನ್ ವಿರುದ್ಧ ಘೋಷಣೆಗಳನ್ನು ಕೂಗಿದರು. ಮೈಸೂರಿನಲ್ಲಿ ನಡೆದ ಮಹಿಷ ದಸರಾ ಕಾರ್ಯಕ್ರಮದಲ್ಲಿ ‘ಒಕ್ಕಲಿಗರು ಸಂಸ್ಕೃತಿ ಹೀನ ಪಶುಗಳು’ ಎಂದು ಕುವೆಂಪು ಹೇಳಿದ್ದರು. ಇದು ನನ್ನ ಮಾತಲ್ಲ ಕುವೆಂಪು ಅವರದು ಎಂದಿದ್ದಾರೆ. ಕೆ.ಎಸ್.ಭಗವಾನ್ ಅವರ ಹೇಳಿಕೆ ಸರಿಯಲ್ಲ. ಕುವೆಂಪು ಅವರ ಹೇಳಿಕೆ ಬಗ್ಗೆ ದಾಖಲೆ ಇದ್ದರೆ ನೀಡಲಿ. ಅದನ್ನು ಬಿಟ್ಟು ಸುಮ್ಮನೆ ಪ್ರಚಾರಕ್ಕಾಗಿ ಒಕ್ಕಲಿಗ ಸಮುದಾಯದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವುದು ಖಂಡನೀಯ ಎಂದರು.
ಕೆ.ಎಸ್.ಭಗವಾನ್ ಅವರಿಗೆ ಸಂಸ್ಕೃತಿಯ ಪದದ ಅರ್ಥವೇ ಗೊತ್ತಿಲ್ಲ. ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದಾರೆಂಬುದಕ್ಕೆ ಅವರ ಮಾತುಗಳಿಂದಲೇ ತಿಳಿಯುತ್ತದೆ. ಕುವೆಂಪು ಅವರನ್ನು ಪ್ರಚಾರಕ್ಕಾಗಿ ಎಳೆದು ತಂದಿರುವ ಇವರಿಗೆ ಸರ್ಕಾರ ಆಸ್ಪತ್ರೆಗೆ ದಾಖಲಿಸಿ ಸೂಕ್ತ ಚಿಕಿತ್ಸೆ ಕೊಡಿಸಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ವಿವಾದ್ಮಾತಕ ಹೇಳಿಕೆಗಳನ್ನು ನೀಡಿ ಸಮಾಜದ ಶಾಂತಿ ಕದಡುವ ಇಂತಹ ವ್ಯಕ್ತಿಗಳಿಗೆ ಸಾರ್ವಜನಿಕವಾಗಿ ಎಲ್ಲಿಯೂ ಮಾತನಾಡಲು ವೇದಿಕೆ ಸಿಗದಂತೆ ನಿರ್ಬಂಧ ಹೇರಬೇಕು. ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕು ಎಂದು ಒತ್ತಾಯಿಸಿದರು. ನಂತರ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಲೋಕೇಶ್‌ಗೆ ಮನವಿ ಪತ್ರ ಸಲ್ಲಿಸಿ, ಪೊಲೀಸ್ ಠಾಣೆಗೆ ದೂರು ನೀಡಿದರು.
ಮುಖಂಡರಾದ ಮಹೇಶ್ ಕುಮಾರ್, ಟಿ.ನಂದಕುಮಾರ್, ದ್ಯಾಪೇಗೌಡ, ರವಿ ಕಂಸಾಗರ, ವಿ.ಪಿ.ನಾಗೇಶ್, ಪುಟ್ಟರಾಮು, ಸುಂದರರಾಜ್, ಪ್ರಶಾಂತ್, ನಂದಿಪುರ ಕುಮಾರ್, ನಟೇಶ್, ಚಿಕ್ಕಮರಿಗೌಡ, ಜಯಸಿಂಹ ಇತರರಿದ್ದರು.