ಕಂಪ್ಲಿ ಸೇತುವೆ ಸಂಚಾರಕ್ಕೆ ಅನುಮತಿ

06 KAMPLI 02
ಕಂಪ್ಲಿ ತುಂಗಭದ್ರಾ ಸೇತುವೆ ಮೇಲೆ ಪಾದಚಾರಿಗಳ ಓಡಾಟ ಆರಂಭ.
Published on

ಕಂಪ್ಲಿ: ಜಲಾಶಯದಿಂದ ತುಂಗಭದ್ರಾ ನದಿಗೆ ಹರಿದು ಬರುವ ನೀರು ಕಡಿಮೆ ಆಗಿದ್ದರಿಂದ ಇಲ್ಲಿನ ಸೇತುವೆ ಮೇಲೆ ಪಾದಚಾರಿಗಳ ಸಂಚಾರಕ್ಕೆ ಮಂಗಳವಾರ ಅನುಮತಿಸಲಾಯಿತು. ವಾಹನಗಳ ಓಡಾಟದ ಅನುಮತಿಗಾಗಿ ಜನತೆ ಚಾತಕ ಪಕ್ಷಿಯಂತೆ ನಿರೀಕ್ಷಿಸುತ್ತಿದ್ದಾರೆ.

ಸೇತುವೆ ಸದೃಢವಾಗಿದ್ದು, ವಾಹನಗಳನ್ನು ಹೊರತುಪಡಿಸಿ ಪಾದಚಾರಿಗಳು ಮಾತ್ರ ಸಂಚರಿಸಬೇಕಿದೆ. ಈ ವೇಳೆ ಪಾದಚಾರಿಗಳು ಸುರಕ್ಷತೆ ಕಾಪಾಡಿಕೊಳ್ಳಲು ಜಾಗೃತಿ ತೋರುವಂತೆ ಗಂಗಾವತಿ ಲೋಕೋಪಯೋಗಿ ಇಲಾಖೆ ಎಇಇ ಜೆ.ವಿಶ್ವನಾಥ ಸೂಚಿಸಿದ್ದಾರೆ.

ಕಳೆದ ಹನ್ನೊಂದು ದಿನಗಳಿಂದ ಸಂಚಾರ ನಿಷೇಧಗೊಂಡಿದ್ದು, ಇದೀಗ ಸಂಚಾರಕ್ಕೆ ಅವಕಾಶ ಸಿಕ್ಕಿದ್ದರಿಂದ ನಿರಾಳರಾಗಿದ್ದಾರೆ. ಗಂಗಾವತಿಗೆ ಪಯಣಿಸುವ ಪ್ರಯಾಣಿಕರು ಪಟ್ಟಣದ ಬಸ್‌ನಿಲ್ದಾಣದಿಂದ ಕೋಟೆ ಸೇತುವೆವರೆಗೆ ಆಟೋದಲ್ಲಿ ಬಂದು, ಸೇತುವೆ ಮೇಲೆ ನಡೆದು ಸಾಗಿ, ಚಿಕ್ಕಜಂತಕಲ್‌ನಿಂದ ಗಂಗಾವತಿಗೆ ಪುನಃ ಆಟೋದಲ್ಲಿ ತೆರಳಬೇಕಿದೆ.

ಡಬಲ್ ಖರ್ಚು ಮತ್ತು ದೈಹಿಕ ಶ್ರಮವಾಗಿದ್ದು ಹೊಸ ಸೇತುವೆ ನಿರ್ಮಿಸಿದ್ದಲ್ಲಿ ಈ ಕಿರಿಕಿರಿಯಿಂದ ಪಾರಾಗಲು ಸಾಧ್ಯ ಎಂದು ಪಾದಚಾರಿಗಳ ಅನಿಸಿಕೆ. ಸೇತುವೆ ನೋಡಲು, ಸೇತುವೆ ಮೇಲೆ ನಿಂತು ವಿಡಿಯೋ, ಪೋಟೊ ತೆಗೆಯಲು, ಸೆಲ್ಫಿ ತೆಗೆದುಕೊಳ್ಳಲು ಬರುವವರನ್ನು ನಿಯಂತ್ರಿಸುವುದೇ ಪೊಲೀಸರಿಗೆ ತಲೆನೋವಾಗಿದೆ.

ನದಿಯಲ್ಲಿ ನೀರಿನ ಪ್ರವಾಹ ಇಳಿಮುಖವಾಗಿದ್ದು ಮತ್ತೇ ಮೀನುಬೇಟೆ, ಮರಳು ಸಂಗ್ರಹಣೆಯತ್ತ ತೆರಳಲು ಸಿದ್ಧತೆಗೆ ಮುಂದಾಗಿದ್ದಾರೆ. ನದಿಯಲ್ಲಿ ನೀರಿನ ಪ್ರವಾಹದಿಂದಾಗಿ ಮರಳು ಸಂಗ್ರಹಣೆ ತೊಡಕಾಗಿ ಪರಿಣಮಿಸಿದ್ದು ಕಟ್ಟಡ ನಿರ್ಮಾಣ ಕಾಮಗಾರಿಗೆ ಮರಳಿನ ಕೊರತೆಯಾಗಿತ್ತು.

ಪ್ರವಾಹ ಬಂದು ಹೋದ ಮೇಲೆ ಮೀನುಗಾರರು, ಕೃಷಿಕರು, ಕೃಷಿ ಕಾರ್ಮಿಕರು, ಪ್ರಯಾಣಿಕರು ನಿಟ್ಟಿಸಿರು ಬಿಟ್ಟಿದ್ದು, ನದಿಯಲ್ಲಿ ಸೇತುವೆ ಕೆಳಗಡೆ ನೀರು ಹರಿದರೆ ಸಾಕು ಎನ್ನುವಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net