ಸೇತುವೆ ನಿರ್ಮಾಣ ಕನಸಿಗೆ ಸಹಕಾರ : ಮತ್ತಾವಿಗೆ ಅರಣ್ಯ ಅಧಿಕಾರಿಗಳು ಭೇಟಿ ; ಸಮಸ್ಯೆ ಪರಿಹಾರ ಕ್ರಮ ಭರವಸೆ

forest
ಹೆಬ್ರಿ ತಾಲೂಕು ಮುದ್ರಾಡಿ ಗ್ರಾಪಂ ವ್ಯಾಪ್ತಿಯ ಸೇತುವೆ ನಿರ್ಮಿಸಲು ಒತ್ತಾಯಿಸಿರುವ ಮತ್ತಾವಿಗೆ ಕುದುರೆಮುಖ ರಾಷ್ಟ್ರೀಯ ವನ್ಯಜೀವಿ ವಿಭಾಗದ ಡಿಸಿಎಫ್ ಶಿವರಾಮ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ
ಮುದ್ರಾಡಿ ಗ್ರಾಪಂ ವ್ಯಾಪ್ತಿಯ ಸೇತುವೆ ನಿರ್ಮಿಸಲು ಒತ್ತಾಯಿಸಿರುವ ಮತ್ತಾವಿಗೆ ಕುದುರೆಮುಖ ರಾಷ್ಟ್ರೀಯ ವನ್ಯಜೀವಿ ವಿಭಾಗದ ಡಿಸಿಎಫ್ (ಉಪ ಅರಣ್ಯ ಸಂರಕ್ಷಣಾಧಿಕಾರಿ) ಶಿವರಾಮ ಬಾಬು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರಾಷ್ಟ್ರೀಯ ಹೆದ್ದಾರಿ ಇಲಾಖೆಯವರು ಮತ್ತಾವು ಸೇತುವೆ ನಿರ್ಮಾಣದ ಜವಾಬ್ದಾರಿ ಹೊತ್ತು ಅದಕ್ಕೆ ಬೇಕಾದ ದಾಖಲೆಗಳನ್ನು ಸ್ಟೇಟ್ ಬೋರ್ಡ್ ಫಾರ್ ವೈಲ್ಡ್ ಲೈಫ್‌ಗೆ ಸಲ್ಲಿಸಿದ್ದರು. ಇಲ್ಲಿಂದ ಕಡತ ಅನುಮೋದನೆಗೊಂಡು ನ್ಯಾಷನಲ್ ಬೋರ್ಡ್ ಫಾರ್ ವೇಟ್ ಲೈಫ್‌ಗೆ ರವಾನೆಯಾಗಿತ್ತು. ಅಲ್ಲಿ ಕೆಲವು ತಾಂತ್ರಿಕ ಪ್ರಶ್ನೆ ಕೇಳಲಾಗಿತ್ತು. ಅದು ಸುಮಾರು ಒಂದುವರೆ ವರ್ಷದಿಂದ ಸಂಬಂಧಪಟ್ಟವರಿಗೆ ಗೊತ್ತೇ ಇರಲಿಲ್ಲ. ಇಲ್ಲದಿದ್ದಲ್ಲಿ ಈ ಸಮಯದಲ್ಲಿ ಸೇತುವೆ ನಿರ್ಮಾಣವಾಗುತ್ತಿತ್ತು. ಅರಣ್ಯ ಇಲಾಖೆಯವರು ಇಲಾಖೆ ಲಾಗಿನ್ ಇಂದ ಎಲ್ಲ ದಾಖಲೆಗಳನ್ನು ಡಿಸಿಎಫ್ ಲಾಗಿನ್‌ಗೆ ಪಡೆಯುತ್ತಾರೆ. ನ್ಯಾಷನಲ್ ಬೋರ್ಡ್ ಫಾರ್ ವೈಲ್ಡ್ ಲೈಫ್‌ನಿಂದ ಬಂದ ಎಲ್ಲ ಪ್ರಶ್ನೆಗಳಿಗೆ ಸರಿಯಾದ ಉತ್ತರ ತಯಾರಿಸಿ ಎರಡು ಮೂರು ದಿನಗಳಲ್ಲಿ ಸಂಬಂಧಪಟ್ಟವರಿಗೆ ಸಲ್ಲಿಸುತ್ತಾರೆ. ಇದರ ಸಂಪೂರ್ಣ ಜವಾಬ್ದಾರಿ ಆರ್‌ಎಫ್‌ಒ ಶಶಿಧರ್ ಗೌಡ ಪಾಟೀಲ್ ನೋಡಿಕೊಳ್ಳುತ್ತಾರೆ. ಶೀಘ್ರದಲ್ಲಿ ಸಂಬಂಧಪಟ್ಟ ಎಲ್ಲ ದಾಖಲೆ ಸಿದ್ಧಪಡಿಸಿ ಸೇತುವೆ ನಿರ್ಮಾಣದ ಕನಸಿಗೆ ಸಹಕಾರ ನೀಡಲಾಗುವುದೆಂದು ಡಿಸಿಎಫ್ ಶಿವರಾಮ ಬಾಬು ತಿಳಿಸಿದ್ದಾರೆ.

ಎಸಿಎಫ್ ಸತೀಶ್ ಎನ್., ಆರ್‌ಎಫ್‌ಒ ಶಶಿಧರ ಗೌಡ ಪಾಟೀಲ್, ಸಿಬ್ಬಂದಿ ಉಪಸ್ಥಿತರಿದ್ದರು.

ಅಂದಾಜು ಪಟ್ಟಿ ತಯಾರಿಕೆಗೆ ಸೂಚನೆ: ಸೇತುವೆ ನಿರ್ಮಾಣ ಮಾಡಲು ಬೇಕಾದ ಅಂದಾಜು ಪಟ್ಟಿ ತಯಾರಿಸಿಕೊಡಲು ನಿರ್ಮಿತಿ ಕೇಂದ್ರಕ್ಕೆ ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಉಡುಪಿ ಯೋಜನೆ ಸಮನ್ವಯಾಧಿಕಾರಿ ನಾರಾಯಣಸ್ವಾಮಿ ಯೋಜನೆ ರೂಪಿಸಿದ್ದಾರೆ. ಕೇಂದ್ರ ಕಚೇರಿ ಬೆಂಗಳೂರಿಗೆ ಅನುದಾನ ನೀಡಲು ಪತ್ರ ಬರೆಯಲಾಗುವುದು ಎಂದು ತಿಳಿಸಿದ್ದಾರೆ.

ವಿಜಯವಾಣಿಗೆ ಧನ್ಯವಾದ: ಅಧಿಕಾರಿಗಳು ಇತ್ತೀಚೆಗಷ್ಟೇ ಕಾರ್ಕಳಕ್ಕೆ ಬಂದಿದ್ದರು. ಅವರಿಗೆ ಯಾವುದೇ ಮಾಹಿತಿ ಇರಲಿಲ್ಲ. ವಿಜಯವಾಣಿ ಪತ್ರಿಕೆಯವರು ಸಂಪರ್ಕ ಮಾಡಿದ ನಂತರ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪಡೆದು ಸಂಬಂಧಪಟ್ಟವರಿಗೆ ರವಾನಿಸಲು ಸನ್ನದ್ಧರಾಗಿದ್ದಾರೆ. ಇದಕ್ಕಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಪತ್ರಿಕೆಗೆ ಧನ್ಯವಾದ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net