ಕಾಲಮಿತಿಯೊಳಗೆ ಕಾಮಗಾರಿ ಪೂರ್ಣಗೊಳಿಸಿ

26 DEVDURGA 05
ದೇವದುರ್ಗ ಚಿಕ್ಕಹೊನ್ನಕುಣಿ ನೀರಾವರಿ ಇಲಾಖೆ ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘ ಪ್ರತಿಭಟನೆ ನಡೆಸಿತು. ರಾಜ್ಯ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್, ರಾಜ್ಯ ಕಾರ್ಯದರ್ಶಿ ಸೂಗರಯ್ಯ ಆರ್.ಎಸ್.ಮಠ, ಜಿಲ್ಲಾಧ್ಯಕ್ಷ ಪ್ರಭಾಕರ ಪಾಟೀಲ್ ಇಂಗಳದಾಳ, ಬಸವರಾಜ ಮಾಪಾ, ಬೂದಯ್ಯಸ್ವಾಮಿ ಗಬ್ಬೂರು, ಉಮಾಪತಿಗೌಡ ಇತರರಿದ್ದರು.
Published on

ದೇವದುರ್ಗ: ನಾರಾಯಣಪುರ ಬಲದಂಡೆ ಉಪಕಾಲುವೆಗಳ ನವೀಕರಣ ಕಾಮಗಾರಿ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು. ಬಾಕಿ ಉಳಿದ ಕಾಮಗಾರಿ ಕ್ರಮಬದ್ಧವಾಗಿ ನಿರ್ಮಿಸಲು ಒತ್ತಾಯಿಸಿ ಪಟ್ಟಣದ ಚಿಕ್ಕಹೊನ್ನಕುಣಿಯಲ್ಲಿರುವ ಕೆಬಿಜೆಎಲ್‌ಎಲ್ ಉಪಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಬುಧವಾರ ಪ್ರತಿಭಟನೆ ನಡೆಸಿದರು.

ಗೌರವ ಅಧ್ಯಕ್ಷ ಚಾಮರಸ ಮಾಲಿಪಾಟೀಲ್ ಮಾತನಾಡಿ, ಬಲದಂಡೆ ನಾಲೆ ವ್ಯಾಪ್ತಿಯ 18 ಉಪಕಾಲುವೆಗಳ ನವೀಕರಣ ಕಾಮಗಾರಿಗಾಗಿ ಸರ್ಕಾರ 1,466 ಕೋಟಿ ರೂ. ಅನುದಾನ ನೀಡಿದೆ. ಎನ್.ಡಿ. ವಡ್ಡರ್ ಕಂಪನಿ ಗುತ್ತಿಗೆ ಪಡೆದು ಬೇರೆಯವರಿಗೆ ಉಪಗುತ್ತಿಗೆ ನೀಡಿದ್ದು ಕಾಮಗಾರಿ ಕಳಪೆ ಹಾಗೂ ಅರೆಬರೆಯಾಗಿ ಮಾಡಲಾಗಿದೆ. ಇದರಿಂದ ಕಾಲುವೆಗಳು ಸಂಪೂರ್ಣ ಹಾಳಾಗಿದ್ದು ಎಲ್ಲೆಂದರಲ್ಲಿ ಬಿರುಕು ಬಿಟ್ಟಿವೆ.

ಕಾಮಗಾರಿಗಳ ಬಗ್ಗೆ ಹಲವು ಲೋಪಕಂಡುಬಂದಿದ್ದರಿಂದ ಉನ್ನತಮಟ್ಟದ ತನಿಖೆ ಕೂಡಾ ನಡೆದಿದೆ. ಆದರೆ ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳದೆ ನಿರ್ಲಕ್ಷ್ಯಮಾಡಿದೆ. ಹಲವು ಕಡೆಗಳಲ್ಲಿ ಹೂಳುತೆಗೆದು ಕಾಂಕ್ರೀಟ್ ಕಾಮಗಾರಿಯೇ ಮಾಡಿಲ್ಲ. ಇದರಿಂದ ರೈತರ ಕೊನೇಭಾಗಕ್ಕೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ನೀರಿನಂತೆ ಹಣ ಖರ್ಚಾದರೂ ಕೆಲಸ ಮಾಡದೆ ರೈತರಿಗೆ ಸಮಸ್ಯೆ ಉಂಟುಮಾಡಿದ್ದಾರೆ ಎಂದು ದೂರಿದರು.

ಕಾಲಮಿತಿಯೊಳಗೆ ಉಳಿದ ಕಾಮಗಾರಿ ಗುಣಮಟ್ಟದಲ್ಲಿ ಮಾಡಬೇಕು. ಎಲ್ಲ ಉಪಕಾಲುವೆಗಳ ಮತ್ತು ಲ್ಯಾಟ್ರಲ್‌ಗಳ ಸಿಟಿಸಿ, ಡ್ರಾಪ್ ಹೊಸದಾಗಿ ನಿರ್ಮಿಸಬೇಕು. ರೈತರ ಜಮೀನಿಗೆ ಸಮರ್ಪಕವಾಗಿ ನೀರು ತಲುಪಿಸಲು ಇಂಜಿನಿಯರ್ ಹಾಗೂ ಸಿಬ್ಬಂದಿ ನಿಯೋಜಿಸಬೇಕು. ಕಾಲುವೆ ಮೇಲೆ ಸಂಚಾರಕ್ಕೆ ಸರ್ವೀಸ್ ರಸ್ತೆ ನಿರ್ಮಿಸಬೇಕು. ಉಪಕಾಲುವೆಗಳ ಗೇಟ್‌ಗಳನ್ನು ನಿರ್ಮಿಸಬೇಕು ಎಂದು ಒತ್ತಾಯಿಸಿದರು.

ಪ್ರಮುಖರಾದ ಲಿಂಗಾರೆಡ್ಡಿ ಪಾಟೀಲ್, ರಾಮನಗೌಡ ಗಣೇಕಲ್, ಹನುಮಗೌಡ ಜಾಲಹಳ್ಳಿ, ರಮೇಶ ಅಬಕಾರಿ, ಗೋವಿಂದನಾಯಕ, ಹಾಜಿ ಮಸ್ತಾನ್, ಉಮಾಪತಿಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net