ಪಿಎಂಎವೈ ಅಕ್ರಮ ಲೋಕಾಯುಕ್ತಕ್ಕೆ ದೂರು

ಪಿಎಂಎವೈ ಅಕ್ರಮ ಲೋಕಾಯುಕ್ತಕ್ಕೆ ದೂರು
Published on

ಹಾಸನ: ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ (ಪಿಎಂಎವೈ)ಯಡಿ ಅಕ್ರಮ ನಡೆದಿರುವ ಬಗ್ಗೆ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ.

ಬಡವರಿಗೆ ಮನೆ ಹಂಚಿಕೆಯಲ್ಲಿ ಮೋಸ ಮಾಡಿ ಭ್ರಷ್ಟಾಚಾರ ಎಸಗಿರುವ ಅಧಿಕಾರಿಗಳ ವಿರುದ್ಧ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಕೋರಿ ಎಎಪಿ ರಾಜ್ಯ ಉಪಾಧ್ಯಕ್ಷ ಎ.ಟಿ.ಅಗಿಲೆ ಯೋಗೇಶ್, ಜಿಲ್ಲಾಧ್ಯಕ್ಷ ತೇಜೂರು ಆನಂದ್, ತಾಲೂಕು ಅಧ್ಯಕ್ಷ ಮಂಜುನಾಥ್ ಮೊದಲಾದವರು ದೂರು ನೀಡಿದರು.

ಸದರಿ ಯೋಜನೆಯಡಿ ಜಿಲ್ಲೆ ಮಾತ್ರವಲ್ಲದೆ ರಾಜ್ಯಾದ್ಯಂತ ನೂರಾರು ಕೋಟಿ ರೂ. ಅವ್ಯವಹಾರ ನಡೆದಿದ್ದು, ದೊಡ್ಡ ಹಗರಣದ ಬಗ್ಗೆ ತನಿಖೆ ನಡೆಸಿ, ಭ್ರಷ್ಟರನ್ನು ಶಿಕ್ಷಿಸಿ ಎಂದು ಮನವಿ ಮಾಡಿದರು.

ಸಕಲೇಶಪುರ ತಾಪಂ ಇಒ ಗಂಗಾಧರನ್ ಜಿ.ಡಿ., ಜಿಪಂ ಮುಖ್ಯ ಲೆಕ್ಕಾಧಿಕಾರಿ ತಫಜುಲ್ ಹುಸೇನ್, ಅರಸೀಕೆರೆ ತಾಪಂ ಇಒ ಸತೀಶ್, ಪಿಎಂಎವೈ ಸಕಲೇಶಪುರ ನೋಡೆಲ್ ಅಧಿಕಾರಿ ರಾಜೇಶ್, ಹಾಸನ ನೋಡೆಲ್ ಅಧಿಕಾರಿಗಳಾದ ಚಿದಾನಂದ, ಗುರುಮೂರ್ತಿ ಮತ್ತು ಅರಸೀಕೆರೆಯ ಪಾಲಾಕ್ಷ ಅವರ ವಿರುದ್ಧ ದೂರು ನೀಡಲಾಗಿದೆ.

ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಿಎಂಎವೈ ಯೋಜನೆ, ಕೇಂದ್ರ ಶೇ.60, ರಾಜ್ಯದ ಶೇ.40 ಅನುದಾನದಲ್ಲಿ ಮನೆ ಇಲ್ಲದವರಿಗೆ ಸೂರು ನಿರ್ಮಿಸಿಕೊಡುವುದಾಗಿದೆ. ಪಿಡಿಒಗಳು ಮನೆಯಿಲ್ಲದವರನ್ನು ಗುರುತಿಸಿ ಪಟ್ಟಿ ಮಾಡುತ್ತಾರೆ. ತಾಪಂ ಇಒ ಪರಿಶೀಲಿಸಿ, ಜಿಪಂ ಯೋಜನಾಧಿಕಾರಿಗೆ ಕಳಿಸುತ್ತಾರೆ. ಮುಖ್ಯ ಲೆಕ್ಕಾಧಿಕಾರಿ ಅರ್ಹರಿಗೆ ಹಣ ಬಿಡುಗಡೆ ಮಾಡುತ್ತಾರೆ ಎಂದರು.

ಹೊರಗುತ್ತಿಗೆ ನೌಕರರೊಂದಿಗೆ ವಿವಿಧ ಅಧಿಕಾರಿಗಳು ಸೇರಿ ಭ್ರಷ್ಟಾಚಾರ ಎಸಗಿದ್ದಾರೆ. ಫಲಾನುಭವಿಗಳಲ್ಲದವರ ಖಾತೆಗೆ ಹಣ ಹಾಕಿ ನಂತರ ಬೆದರಿಸಿ ವಾಪಸ್ ಪಡೆದುಕೊಂಡಿದ್ದಾರೆ. ಯಾರೆಲ್ಲ ಭಾಗಿಯಾಗಿದ್ದಾರೋ ಅವರಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದರು.

ಈ ಹಗರಣದ ಕಾರಣಕ್ಕೆ ಪಿಡಿಒಗಳನ್ನು ಅಮಾನತು ಮಾಡಿದರೆ ಸಾಲದು. ಪಟ್ಟಿ ಪರಿಶೀಲಿಸುವ, ಹಣ ಬಿಡುಗಡೆ ಮಾಡುವ ಅಧಿಕಾರಿಗಳನ್ನೂ ದಂಡಿಸಬೇಕು ಎಂದು ಆಗ್ರಹಿಸಿದರು.

ಅಮಾಯಕರ ಅಕೌಂಟ್ ನಂಬರ್, ಆಧಾರ್ ಕಾರ್ಡ್ ಪಡೆದು ಹಣ ಹಾಕಿದವರನ್ನೂ ಕೂಡಲೇ ಬಂಧಿಸಬೇಕು. ಇಷ್ಟೆಲ್ಲ ಆಗಿದ್ದರೂ ಜಿಪಂ ಸಿಇಒ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಹಗರಣ ನಮಗೆ ಗೊತ್ತೇ ಇಲ್ಲ, ಆದರೂ ನಮ್ಮನ್ನು ಬಲಿ ಪಶು ಮಾಡಲಾಗುತ್ತಿದೆ ಎಂದು ಪಿಡಿಒಗಳು ರಾಜ್ಯ ಸಂಘಕ್ಕೆ ದೂರು ಕೊಡುತ್ತಿದ್ದಾರೆ. ಈ ಬಗ್ಗೆ ಡಿಸಿ ಅವರು ಸರ್ಕಾರದ ಗಮನಕ್ಕೆ ತರಬೇಕು. ಸಂಬಂಧಪಟ್ಟ ಸಚಿವರು, ಮೇಲಧಿಕಾರಿಗಳು ಹಗರಣದ ಬಗ್ಗೆ ಕೂಲಂಕಷ ಪರಿಶೀಲನೆ ನಡೆಸಿ ನಿಜವಾಗಿ ತಪ್ಪು ಮಾಡಿರುವವರಿಗೆ ಶಿಕ್ಷೆ ಕೊಡಿಸಬೇಕು ಎಂದು ಆಗ್ರಹಿಸಿದರು.

ಶೀಘ್ರ ಕ್ರಮ ಕೈಗೊಳ್ಳದೆ ಇದ್ದರೆ ಮೊದಲು ಡಿಸಿ ಕಚೇರಿ ಎದುರು ಧರಣಿ ನಡೆಸಿ ನಂತರ ಸಂಬಂಧಪಟ್ಟ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net