

ಬೆಂಗಳೂರು: ಬಿಜೆಪಿ ಶಾಸಕ ಸಿದ್ದು ಸವದಿ ಅವರ ವಿರುದ್ಧ ಕಾಂಗ್ರೆಸ್ ಮಹಿಳಾ ಘಟಕವು ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಬಾಗಲಕೋಟೆಯ ಮಹಾಲಿಂಗಪುರ ಪುರಸಭೆ ಚುನಾವಣೆ ದಿನದಂದು ಪುರಸಭೆ ಸದಸ್ಯೆ ಚಾಂದಿನಿ ನಾಯಕ್ ಅವರನ್ನು ತಳ್ಳಿ ಗರ್ಭಪಾತವಾಗುವಂತೆ ಮಾಡಲಾಗಿದೆ ಎಂದು ದೂರಿನಲ್ಲಿ ದಾಖಲಿಸಲಾಗಿದೆ.
ದಿನಾಂಕ 9/11/2020ರಂದು ಪುರಸಭೆ ಚುನಾವಣೆ ನಡೆಯುವ ವೇಳೆ ಸದಸ್ಯೆ ಚಾಂದಿನಿ ನಾಯಕ್ ಅವರು ಪುರಸಭೆಗೆ ಹೋಗುತ್ತಿದ್ದಂತೆ ಶಾಸಕ ಸಿದ್ದು ಸವದಿ ಅವರು ಬಾಗಿಲಲ್ಲಿ ಸಾರ್ವಜನಿಕವಾಗಿ ತಡೆದಿದ್ದಾರೆ. ಸದಸ್ಯೆ ಮತದಾನ ಮಾಡಲು ಮುಂದಾಗಿದ್ದಾಗ ಶಾಸಕರು ಮತ್ತು ಅವರ ಬೆಂಬಲಿಗರು ಆಕೆಯನ್ನು ತಳ್ಳಿ, ಮೆಟ್ಟಿಲಿನಿಂದ ಕೆಳಗೆ ಬೀಳುವಂತೆ ಮಾಡಿದ್ದಾರೆ. ಇದರ ಪರಿಣಾಮವಾಗಿ ಮೂರು ತಿಂಗಳ ಗರ್ಭವತಿ ಚಾಂದಿನಿ ಅವರಿಗೆ ಗರ್ಭಪಾತವಾಗಿದೆ ಎಂದು ಕಾಂಗ್ರೆಸ್ ನಾಯಕಿಯರು ದೂರಿದ್ದಾರೆ.
ಶಾಸಕರು ಮತ್ತು ಅವರ ಬೆಂಬಲಿಗರ ವಿರುದ್ಧ ಕ್ರಮ ಜರುಗಿಸಬೇಕು ಹಾಗೂ ಭ್ರೂಣ ಹತ್ಯೆ ನಷ್ಟ ಪರಿಹಾರವಾಗಿ 5 ಕೋಟಿ ರೂಪಾಯಿ ಧನ ಸಹಾಯ ಮಾಡಲು ಆದೇಶಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ. ಮಹಿಳಾ ಸದಸ್ಯರ ಗತಿಯೇ ಹೀಗಾದರೆ ಇನ್ನು ಸಾಮಾನ್ಯ ಮಹಿಳೆಯರ ಗತಿಯೇನು ಎಂದು ಪ್ರಶ್ನಿಸಲಾಗಿದೆ.