ಕಾಂಗ್ರೆಸ್‌ಮುಕ್ತ ಗ್ರಾಮ ಪಂಚಾಯಿತಿ ಸವಾಲು ಸ್ವೀಕರಿಸಿ, ಕಾರ‌್ಯಕರ್ತರಿಗೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕರೆ

30-klr-1
Published on

ಕೋಲಾರ: ಕಾಂಗ್ರೆಸ್‌ಮುಕ್ತ ಪಂಚಾಯಿತಿ ಆಗಬೇಕೆಂಬ ಸಂಕಲ್ಪ ಪ್ರಧಾನಿ ಮೋದಿ ಅವರದ್ದು. ಈ ಸಾಲಿನ ಗ್ರಾಪಂ ಚುನಾವಣೆಯಲ್ಲಿ ಈ ಸಂಕಲ್ಪವನ್ನು ಸವಾಲಾಗಿ ಸ್ವೀಕರಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಕಾರ್ಯಕರ್ತರಿಗೆ ರಣವೀಳ್ಯ ನೀಡಿದರು.

ನಗರ ಹೊರವಲಯದ ನಂದಿನಿ ಪ್ಯಾಲೇಸ್‌ನಲ್ಲಿ ಸೋಮವಾರ ನಡೆದ ಗ್ರಾಮಸ್ವರಾಜ್ಯ ಸಮಾವೇಶ ಉದ್ಘಾಟಿಸಿ ಮಾತನಾಡಿ, ಪ್ರಧಾನಿ ಮೋದಿಯ ಕಾಂಗ್ರೆಸ್‌ಮುಕ್ತ ಭಾರತದ ಕನಸು ಕಳೆದ ಆರೂವರೆ ವರ್ಷಗಳಲ್ಲಿ ನನಸಾಗಿದೆ. ರಾಜ್ಯದಲ್ಲಿ ಪರಿವರ್ತನೆಯ ಆಡಳಿತ ಕಾಲಘಟ್ಟದ ಸ್ವರ್ಣಯುಗದಲ್ಲಿ ಬಿಜೆಪಿ ಕಾರ್ಯಕರ್ತನಿದ್ದಾನೆ. ಕೇಂದ್ರದಲ್ಲಿ ಜಗತ್ತು ಒಪ್ಪುವ ನಾಯಕ ಮೋದಿ, ರಾಜ್ಯ ಒಪ್ಪುವ ನಾಯಕ ಯಡಿಯೂರಪ್ಪ ಇದ್ದಾರೆ. ಸರ್ಕಾರದ ಕಾರ್ಯವೈಖರಿಗೆ ಜನ ಮೆಚ್ಚಿದ್ದಾರೆ. ಪಂಚಾಯಿತಿ ಚುನಾವಣೆೆಯಲ್ಲಿ ಬಿಜೆಪಿ ಕಾರ್ಯಕರ್ತನಿಗೆ ಆಶೀರ್ವಾದ ಮಾಡಲು ಜನ ಕಾಯುತ್ತಿದ್ದಾರೆ ಎಂದರು.

ಸ್ವಾತಂತ್ರ್ಯಾ ನಂತರದ ದಿನಗಳಲ್ಲಿ ಗಾಂಧಿ ಕನಸು ರಾಮರಾಜ್ಯವಾಗಿತ್ತು. ಗಾಂಧಿ ಹೆಸರು ಪಡೆದ ಕಾಂಗ್ರೆಸ್ ಅದೇ ಹೆಸರಲ್ಲಿ 75 ವರ್ಷ ಮತ ಪಡೆಯಿತು. ಕುಟುಂಬ ರಾಜಕಾರಣ ಮಾಡಿತು. ಆದರೆ ಗಾಂಧಿ ವಿಚಾರಗಳನ್ನು ಅನುಷ್ಠಾನಕ್ಕೆ ತರಲಿಲ್ಲ. ಗ್ರಾಮ ಸ್ವರಾಜ್ಯಕ್ಕೆ ಸ್ವಾಯುತ್ತತೆ ನೀಡಲಿಲ್ಲ. ಆದರೆ ಅದೇ ಗುಜರಾತ್‌ನಿಂದ ಬಂದ ಮೋದಿ ಆ ವಿಚಾರಧಾರೆಗಳನ್ನು ಆಡಳಿತಕ್ಕೆ ತಂದು ಗ್ರಾಪಂಗೆ ಸ್ವಾಯುತ್ತತೆ ನೀಡಿದರು. 14ನೇ ಹಣಕಾಸಿನಡಿ 30,500 ಕೋಟಿ ರೂ. ಕೇಂದ್ರದಿಂದ ನೇರವಾಗಿ ಗ್ರಾಪಂಗೆ ನೀಡಿದ್ದಾರೆ. ಮುಂದೆ ಪ್ರತಿ ಗ್ರಾಪಂಗೆ 2 ಕೋಟಿ ನೀಡುವ ತೀರ್ಮಾನ ಮಾಡಿದ್ದಾರೆ ಎಂದು ಹೇಳಿದರು.

ಕೇಂದ್ರ ಮತ್ತು ರಾಜ್ಯದಿಂದ ಗ್ರಾಪಂಗೆ ಬಿಡುಗಡೆಯಾಗುವ ಹಣ ಪಾರದರ್ಶಕ ವ್ಯವಸ್ಥೆಯಡಿ ಅಭಿವೃದ್ಧಿಗೆ ವಿನಿಯೋಗ ಆಗಬೇಕು. ಇದನ್ನು ಬಿಜೆಪಿ ಕಾರ್ಯಕರ್ತ ಪಂಚಾಯಿತಿ ಅಧ್ಯಕ್ಷನಾಗಿ, ಸದಸ್ಯನಾಗಿ ಮಾಡಬೇಕು. ಅದಕ್ಕಾಗಿ ಈ ಬಾರಿ ಗ್ರಾಪಂ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬೇಕು. ಗೆಲ್ಲಿಸುತ್ತೇವೆ ಎಂದು ಮಾತು ಕೊಡಿ ಎಂದು ಭಾಷೆ ಪಡೆದುಕೊಂಡರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಜಿಲ್ಲೆಯ 156 ಗ್ರಾಪಂಗಳ 2092 ಸದಸ್ಯರಲ್ಲಿ ಆಯ್ಕೆಯಾಗಿರುವ ಬಿಜೆಪಿ ಕಾರ್ಯಕರ್ತರ ಸಂಖ್ಯೆ ಕೇವಲ 22. ಈ ಬಾರಿ ಇದು ಬದಲಾಗಬೇಕು. ಕೋಲಾರದಲ್ಲಿ ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಗೆಲ್ಲಿಸಿಕೊಂಡು ಬಂದಿದ್ದೀರಿ. ಅದೇ ರೀತಿ ಗ್ರಾಪಂನಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಬೇಕು ಎಂದರು.

ಕೇಂದ್ರ ಮತ್ತು ರಾಜ್ಯದಿಂದ ಗ್ರಾಪಂಗೆ ಬರುವ ಅನುದಾನ, ಯೋಜನೆಯಡಿ ಫಲಾನುಭವಿಗಳ ಆಯ್ಕೆ ಮಾಡುವ ಅವಕಾಶವನ್ನು ಕಾಂಗ್ರೆಸ್, ಜೆಡಿಎಸ್‌ಗೆ ಬಿಡುತ್ತೀರಾ ಎಂದು ಪ್ರಶ್ನಿಸಿದ ಅವರು, ತಾಕತ್ತು ಇರುವ ಕಾರ್ಯಕರ್ತರು ಬಿಜೆಪಿಯಲ್ಲಿ ಸೃಷ್ಟಿಯಾಗಬೇಕು. ಸರ್ಕಾರದ ಜನಪರ ಯೋಜನೆಗಳ ಕುರಿತು ಮನೆ ಮನೆಗೆ ಹೋಗಿ ತಿಳಿಹೇಳಬೇಕು. ಪ್ರತಿ ಗ್ರಾಮಗಳ ಬೀದಿ ಬೀದಿಯಲ್ಲೂ ಬಿಜೆಪಿ ಬಾವುಟ ಹಾರಾಡಬೇಕು ಎಂದು ಕರೆ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಚ್. ನಾಗೇಶ್ ಮಾತನಾಡಿ, ಮುಂಬರುವ ತಾಪಂ, ಜಿಪಂ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಲು ಗ್ರಾಪಂ ಚುನಾವಣೆಯ ಗೆಲುವು ಅತ್ಯವಶ್ಯ. ಗ್ರಾಪಂ ಚುನಾವಣೆಯಲ್ಲಿ ಅಭ್ಯರ್ಥಿಗಳಿಗೆ ಪಕ್ಷದ ಚಿಹ್ನೆ ಇಲ್ಲದಿದ್ದರೂ ನಿರ್ಲಕ್ಷ್ಯ ಮಾಡದೆ ಒಟ್ಟಾಗಿ ಕೆಲಸ ಮಾಡಬೇಕು. ಆಯಾ ಕ್ಷೇತ್ರದಲ್ಲಿ ಮುಖಂಡರು ನಾಯಕತ್ವ ತೆಗೆದುಕೊಂಡು ಕೆಲಸ ಮಾಡಬೇಕೆಂದರು.

ಎಮ್ಮೆಲ್ಸಿ ವೈ.ಎ.ನಾರಾಯಣಸ್ವಾಮಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯ ಉಪಾಧ್ಯಕ್ಷ ಶಂಕರಪ್ಪ, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಜಿಲ್ಲಾ ಪ್ರಭಾರಿ ಜಯಚಂದ್ರರೆಡ್ಡಿ, ಸಹ ಪ್ರಭಾರಿ ಕುಸುಮಾ ಶಿವಶಂಕರ್, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜ್, ಜಿಲ್ಲಾಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಪ್ರಧಾನ ಕಾರ್ಯದರ್ಶಿ ಪಿ.ಎಂ.ಕೃಷ್ಣಮೂರ್ತಿ, ಮಾಜಿ ಶಾಸಕರಾದ ಎ.ನಾಗರಾಜು, ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಜಿಲ್ಲಾಧ್ಯಕ್ಷ ಎನ್.ಲಕ್ಷ್ಮಯ್ಯ, ಜವಳಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಎನ್.ಶ್ರೀರಾಮ್, ಕುಡಾ ಅಧ್ಯಕ್ಷ ಓಂಶಕ್ತಿ ಚಲಪತಿ, ತಾಲೂಕು ಅಧ್ಯಕ್ಷ ಸಿ.ಡಿ.ರಾಮಚಂದ್ರ ಇತರರು ಇದ್ದರು.

ಗೊಂದಲ, ಅಧ್ಯಕ್ಷರ ಅತೃಪ್ತಿ: ಕೆಜಿಎಫ್ ಭಾಗದ ಬಿಜೆಪಿ ಯುವ ಕಾರ್ಯಕರ್ತರು ಅಧ್ಯಕ್ಷರಿಗೆ ಮಾಲಾರ್ಪಣೆಗಾಗಿ ಗುಂಪುಕಟ್ಟಿಕೊಂಡು ಬಂದಾಗ ಕೆಲ ಕಾಲ ಸಭೆಯಲ್ಲಿ ಗೊಂದಲ ಮೂಡಿತು. ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲದೆ ಸಭಾಂಗಣದಿಂದ ಹೊರಹೋಗುವ ಪ್ರಯತ್ನ ನಡೆದಾಗ ಅಧ್ಯಕ್ಷ ಕಟೀಲ್ ಗರಂ ಆದರಲ್ಲದೆ ಕಾರ್ಯಕರ್ತರಿಗೆ ಆಸನದ ವ್ಯವಸ್ಥೆ ಮಾಡುವಂತೆ ತಾಕೀತು ಮಾಡಿ, ಪರಿಸ್ಥಿತಿ ನಿಭಾಯಿಸುವಂತೆ ಸಂಸದರನ್ನು ಕಳುಹಿಸಿಕೊಟ್ಟರು. ಮುಖಂಡರ ಮಧ್ಯಪ್ರವೇಶದ ನಂತರ ಪರಿಸ್ಥಿತಿ ತಿಳಿಯಾಯಿತು.

ಪಕ್ಷದ ಅಭ್ಯರ್ಥಿ ಗೆಲ್ಲಿಸಿ: ಗಾಂಧಿ ಪರಿಕಲ್ಪನೆಯಂತೆ ರಾಮರಾಜ್ಯವಾಗಿ ಪರಿವರ್ತನೆ ಮಾಡುವ ಸದಸ್ಯರಾಗುವಂತಹ ಚಿನ್ನವನ್ನು ಹುಡುಕಿಕೊಂಡು ಬಂದಿದ್ದೇವೆ. ಚುನಾವಣೆ ಘೋಷಣೆ ಆಗಿದೆ. ಪಂಚಾಯಿತಿ ಚುನಾವಣೆಯಲ್ಲಿ ನಮ್ಮ ಇತಿಮಿತಿ, ಸ್ವಾಭಿಮಾನ, ವೈಯಕ್ತಿಕ ಆಸೆ, ಆಕಾಂಕ್ಷೆ ಮರೆತು ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಂಡು ಬನ್ನಿ ಎಂದು ನಳಿನ್ ಕುಮಾರ್ ಕಟೀಲ್ ಕರೆ ನೀಡಿದರು.

ಉಡುಪಿಯಿಂದ ಗ್ರಾಮ ಸ್ವರಾಜ್ಯ ಸಮಾವೇಶ ಆರಂಭಿಸಿ ಕೋಲಾರಕ್ಕೆ ಬಂದಿದ್ದೇವೆ. ಗ್ರಾಪಂ ಚುನಾವಣೆ ಕಾರ್ಯಕರ್ತರ ಚುನಾವಣೆ. ಮುಖಂಡರು, ಕಾರ್ಯಕರ್ತರು ಒಗ್ಗೂಡಿ ಅಭ್ಯರ್ಥಿಯನ್ನು ಗೆಲ್ಲಿಸಿ ನಾಯಕನನ್ನಾಗಿ ಮಾಡಬೇಕು. ಜಿಲ್ಲೆಯಲ್ಲಿ ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಗೆಲ್ಲಿಸಿಕೊಂಡರೂ ತಳ ಗಟ್ಟಿಯಾಗಿಲ್ಲ. ಅಡಿಪಾಯ ಗಟ್ಟಿಯಾಗಬೇಕಾದರೆ ಗ್ರಾಪಂ ಚುನಾವಣೆ ಗೆಲ್ಲಬೇಕು. ಎಸ್.ಮುನಿಸ್ವಾಮಿ, ಸಂಸದ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net