ಬಿಇಒ, ಶಿಕ್ಷಕರು ಸೇರಿ ಹಲವರ ವಿರುದ್ಧ ದೂರು

FotoJet (1)
Published on

ವಿದ್ಯಾರ್ಥಿ ಕಣ್ಣಿಗೆ ಘಾಸಿ ಮಾಡಿದ ಪ್ರಕರಣ

ಚಿಕ್ಕಬಳ್ಳಾಪುರ/ಚಿಂತಾಮಣಿ: ಯಗವಕೋಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗೆ ಕೋಲಿನಿಂದ ಹೊಡೆದು ಕಣ್ಣಿಗೆ ಘಾಸಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷಕಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೇರಿ ಹಲವರ ವಿರುದ್ಧ ಬಟ್ಲಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯಗವಕೋಟೆ ಸರ್ಕಾರಿ ಶಾಲೆಯ ಶಿಕ್ಷಕಿ ಸರಸ್ವತಿ, ಮುಖ್ಯ ಶಿಕ್ಷಕ ಶ್ರೀರಾಮರೆಡ್ಡಿ, ನಿವೃತ್ತ ಶಿಕ್ಷಕ ನಾರಾಯಣಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ, ಯಗವಕೋಟೆ ಗ್ರಾಮದ ಅಶೋಕ್ ರೆಡ್ಡಿ, ವೆಂಕಟರವಣರೆಡ್ಡಿ ಆರೋಪಿಗಳು.

ಪ್ರಕರಣದ ಹಿನ್ನೆಲೆ : ಯಗವಕೋಟೆ ಸರ್ಕಾರಿ ಶಾಲೆಯ ವಿದ್ಯಾರ್ಥಿಗೆ ಶಿಕ್ಷಕಿ ಸರಸ್ವತಿ ತರಗತಿ ಕೊಠಡಿಯಲ್ಲಿ ಕೋಲಿನಿಂದ ಹೊಡೆದಾಗ ಕಣ್ಣಿಗೆ ಪೆಟ್ಟು ಬಿದ್ದಿದೆ ಎನ್ನಲಾಗಿದೆ. ಈ ಬಗ್ಗೆ ಪಾಲಕರು ಬಂದು ವಿಚಾರಿಸಿದಾಗ ಹಣವನ್ನು ಕೊಟ್ಟು ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ, ಹಲವು ತಪಾಸಣೆ, ಶಸಚಿಕಿತ್ಸೆಯ ಬಳಿಕ ಅಂಧತ್ವ ದೂರವಾಗಿಲ್ಲ. ಕೊನೆಗೆ ಕಣ್ಣಿಗೆ ಪೆಟ್ಟು ಬಿದ್ದ ಹಿನ್ನೆಲೆಯಲ್ಲಿ ಬಾಲಕ ದೃಷ್ಟಿ ಕಳೆದುಕೊಂಡಿದ್ದು, ಇನ್ನು ಯಾವುದೇ ಚಿಕಿತ್ಸೆ ನೀಡಿದರೂ ಪ್ರಯೋಜನವಾಗುವುದಿಲ್ಲ ಎಂದು ವೈದ್ಯರು ಸಹ ತಿಳಿಸಿದ್ದಾರೆ. ಇದನ್ನು ಶಿಕ್ಷಕರು, ಶಿಕ್ಷಣ ಇಲಾಖೆಯ ಗಮನಕ್ಕೆ ತಂದ ಸಂದರ್ಭದಲ್ಲಿ ಹಾರಿಕೆ ಉತ್ತರ ನೀಡಿ, ಬೆದರಿಸಿ ಕಳುಹಿಸಿದರು. ಈಗ ಮಗುವಿನ ಭವಿಷ್ಯ ಹಾಳಾಗಿದೆ ಎಂದು ಸಂತ್ರಸ್ತ ಬಾಲಕನ ತಾಯಿ ಅಂಜಲಿ ದೂರಿನಲ್ಲಿ ಆರೋಪಿಸಿದ್ದಾರೆ.

ಆಕ್ರೋಶದಲ್ಲಿ ಕಚೇರಿಗೆ ಮುತ್ತಿಗೆ : ತಿಂಗಳಾನುಗಟ್ಟಲೇ ಮಗುವಿಗೆ ಚಿಕಿತ್ಸೆ ನೀಡಿದರೂ ಕಣ್ಣಿನ ದೃಷ್ಟಿ ಬಾರದ ಹಿನ್ನೆಲೆಯಲ್ಲಿ ಮಗುವಿನ ಸಮೇತ ಪಾಲಕರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಇತ್ತೀಚೆಗೆ ಪ್ರತಿಭಟಿಸಿದ್ದರು. ಇದರ ನಡುವೆ ಸಂಬಂಧಪಟ್ಟವರ ವಿರುದ್ಧ ದೂರು ದಾಖಲಿಸಿಕೊಳ್ಳಲು ಪೊಲೀಸರು ಮೀನಮೇಷ ಎಣಿಸಿದ ಸಂದರ್ಭದಲ್ಲಿ ಮಾಜಿ ಶಾಸಕ ಜೆ.ಕೆ. ಕೃಷ್ಣಾರೆಡ್ಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಶಿಕ್ಷಣ ಇಲಾಖೆ ನಿರ್ಲಕ್ಷ್ಯದ ಬಗ್ಗೆ ವ್ಯಾಪಕ ಆಕ್ರೋಶವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net